ದೈವ ನಿಂದನೆ ಮಾಡಿದ ರಣವೀರ್ ಸಿಂಗ್: ಮಂಜುನಾಥನ ಸನ್ನಿಧಿಯಲ್ಲಿ ಕ್ಷಮೆಯಾಚನೆಗೆ ಆಗ್ರಹ
ಮಂಗಳೂರು: ದೈವ ನಿಂದನೆ ಮಾಡಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಮಂಗಳೂರಿನ ಕದ್ರಿ ಮಂಜುನಾಥನ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕೆಂದು ಕರಾವಳಿಯ ದೈವಾರಾಧಕರು ಆಗ್ರಹಿಸಿದ್ದಾರೆ.
ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದೈವಗಳ ಅನುಕರಣೆ ಮಾಡಿದ ನಟ ರಣವೀರ ಸಿಂಗ್ ತುಳುನಾಡಿನ ದೈವಗಳ ಬಗ್ಗೆ ಅಣಕಿಸಿ ಅವಮಾನ ಮಾಡಿದ್ದಾರೆ. ಇದಕ್ಕೆ ತೀವ್ರ ಬೇಸರ ಮತ್ತು ವಿರೋಧ ವ್ಯಕ್ತಪಡಿಸಿರುವ ಕರಾವಳಿಯ ದೈವಾರಾಧಕರು ಕದ್ರಿ ಮಂಜುನಾಥನ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಕಾರ್ಯಕ್ರಮದಲ್ಲಿ ನಟ ನಿರ್ದೇಶಕ ರಿಷಬ್ ಶೆಟ್ಟಿ ಇದ್ದರೂ ಅದಕ್ಕೆ ವಿರೋಧಿಸದಿರುವುದು ಖಂಡನೀಯ ಎಂದಿದ್ದಾರೆ.
ಕಾರ್ಯಕ್ರಮ ನಡೆಯುವಾಗ ರಿಷಬ್ ಶೆಟ್ಟಿ ಮುಂದಿನ ಸಾಲಿನಲ್ಲೇ ಕುಳಿತಿದ್ದರು. ರಣವೀರ್ ಅನುಕರಣೆಗೆ ಸ್ವತಃ ರಿಷಬ್ ಅವರೇ ನಕ್ಕಿದ್ದಾರೆ. ಬಾಲಿವುಡ್ ನಟನಿಗೆ ರಿಷಬ್ ಯಾಕೆ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಪ್ರಶ್ನಿಸಿದ್ದಾರೆ. ರಣಬೀರ್ ಸಿಂಗ್ ಮಂಗಳೂರಿನ ಕದ್ರಿ ಮಂಜುನಾಥನ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕು. ಈ ತುಳುನಾಡಿನ ಮಣ್ಣಿಗೆ ಶರಣಾಗಬೇಕು. ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಈ ಕೂಡಲೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.