ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಕುಟುಂಬ ಮಿಲನ ಹಾಗೂ ಆವಶ್ಯ ಫೌಂಡೇಶನ್ ಮುಂಬಯಿ ಇವರಿಂದ ಸ್ಕಾಲರ್‌ಶಿಪ್ ವಿತರಣೆ
Monday, December 8, 2025
ಮಂಗಳೂರು: ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ 2ನೇ ವರ್ಷದ ಶಕ್ತಿ ಕುಟುಂಬ ಮಿಲನ ಹಾಗೂ ಆವಶ್ಯ ಫೌಂಡೇಶನ್ ಮುಂಬಯಿ ಸ್ಕಾಲರ್‌ಶಿಪ್ ವಿತರಣಾ ಕಾರ್ಯಕ್ರಮವು ರೇಷ್ಮಾ ಮೆಮೋರಿಯಲ್ ಆಡಿಟೋರಿಯಂನಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಕಾಶವಾಣಿ ಮಂಗಳೂರು ಇದರ ಉದ್ಘೋಷಕರು ಮತ್ತು ಲಯನ್ಸ್ ಕ್ಲಬ್ ಮಂಗಳೂರು ಇದರ ಮಾಜಿ ಅಧ್ಯಕ್ಷೆ ಮಂಜುಳಾ ಶೆಟ್ಟಿ ಹಾಗೂ ಆವಶ್ಯ ಫೌಂಡೇಶನ್ ಸಹಾಯಕ ವ್ಯವಸ್ಥಾಪಕ ಸವಿಸ್ತಾರ್ ಆಳ್ವ ಅವರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಂಜುಳಾ ಶೆಟ್ಟಿ ಮಾತನಾಡಿ, ಈ ವಿದ್ಯಾ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರು ಕೂಡ ಈ ಶಕ್ತಿಯ ಕುಟುಂಬ. ಈ ಕುಟುಂದ ಸದಸ್ಯರಿಗೆ ಭವಿಷ್ಯದಲ್ಲಿ ಸಕಲ ಸೌಲಭ್ಯವನ್ನು ಒದಗಿಸಿಕೊಡಬೇಕು ಎಂಬುದು ಕೆ.ಸಿ. ನಾಕ್ ಅವರ ಆಲೋಚನೆ. ಕುಟುಂಬ ಅಂದರೆ ಅತ್ಯಂತ ಸಣ್ಣದಾದ ಘಟಕ ವಾದರೂ ಅಷ್ಟೇ ಸಮಾಜದ ಪ್ರಾಮುಖ್ಯವಾದ ಅಂಶ. ನಮ್ಮ ವ್ಯಕ್ತಿತ್ವವನ್ನು ಹೊರ ಜಗತ್ತಿಗೆ ಪರಿಚಯಿಸುವುದರಲ್ಲಿ ಕುಟುಂಬದ ಪಾತ್ರ ದೊಡ್ಡದು. ಸ್ವಸ್ತ ಕುಟುಂಬದಿಂದ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ಕೌಟುಂಬಿಕ ಹಿನ್ನೆಲೆ ಸರಿ ಇಲ್ಲದಿದ್ದಾಗ ಅವರ ಜೊತೆ ವ್ಯವಹರಿಸಲು ನಾವು ಹಿಂದೇಟು ಹಾಕುತ್ತೇವೆ ಎಂದು ಹೇಳಿದರು.
ನಮಗೆ ನಮ್ಮ ಮನೆಯಿಂದ ನಮಗೆ ಏನೆಲ್ಲ ಸಂಸ್ಕಾರಗಳು ಸಿಗುತ್ತವೆಯೊ ಆ ಸಂಸ್ಕಾರಗಳಿಂದ ಸಮಾಜದಲ್ಲಿ ನಾವು ಗಟ್ಟಿಯಾಗುತ್ತೇವೆ. ನಮ್ಮ ಮನೆಗಳಲ್ಲಿ ಯಾವ ರೀತಿ ಸಂಸ್ಕಾರ ಕಲಿಯುತ್ತೇವೆಯೋ ಅದೂ ನಮ್ಮ ವ್ಯಕ್ತಿತ್ವವನ್ನು ವರ್ಥಿಸುತ್ತದೆ. ನಾವು ಮಕ್ಕಳಿಗೆ ಒಳ್ಳೆಯ ಸಂಸ್ಕಾರಗಳನ್ನು ಕಲಿಸಿದರೆ ಮಕ್ಕಳು ಸಂಸ್ಕಾರಯುತ ಮಕ್ಕಳಾಗಿ ಬೆಳೆಯುತ್ತಾರೆ. ಕೂಡು ಕುಟುಂಬದಲ್ಲಿ ಮಕ್ಕಳು ಏನೆ ತಪ್ಪು ಮಾಡಿದರು ಅದನ್ನು ತಿದ್ದುವ ಒಳ್ಳೆಯ ಕೆಲಸಗಳನ್ನು ಪ್ರೋತ್ಸಾಹಿಸುವ, ಕಷ್ಟಗಳನ್ನು ಎದುರಿಸಲು ಕಲಿಸುವ ಹಿರಿಯರು ಇದ್ದರು. ಕೂಡು ಕುಟುಂಬದಿಂದ ಸಣ್ಣ ಕುಟುಂಬಕ್ಕೆ ಬದಲಾದ ಹಾಗೆ ಮನೆಯಲ್ಲಿ ಹಿರಿಯರು ಇಲ್ಲದಿರುವ ಕಾರಣ ಮಕ್ಕಳಿಗೆ ಸಮಯ ಕೊಡಲು ಪೋಷಕರಿಗೆ ಸಮಯವೇ ಇಲ್ಲ ಎಂದರು.
ತಾಯಿ ಕೊಡುವ ಸಂಸ್ಕಾರವನ್ನು ಬೇರೆ ಯಾರಿಂದಲೂ ಕೊಡಲು ಸಾಧ್ಯವಿಲ್ಲ. ಎಷ್ಟೇ ಒತ್ತಡದ ಕೆಲಸ ಇದ್ದರು ತಾಯಿಯಾದವಳು ಮಕ್ಕಳಿಗೆ ಸಮಯವನ್ನು ನೀಡಲೇಬೇಕು. ಪೋಷಕರು ಮತ್ತು ಶಿಕ್ಷಕರು ಮಕ್ಕಳ ಜೀವನದಲ್ಲಿ ಮುಖ್ಯ ಬೇರುಗಳಿದ್ದಂತೆ. ಕುಟುಂಬ ಅನ್ನೋದು ನಮಗೆ ಒಂದು ಭದ್ರತೆ ನೀಡುವ ಸ್ಥಳ. ವಿಶಾಲವಾದ ಆಲೋಚನೆ ನಮ್ಮಲ್ಲಿರಬೇಕು ಕುಟುಂಬದ ಪರಿಧಿಯಿಂದ ಹೊರಗೆ ಬಂದು ಸಮಾಜದೊಂದಿಗೆ ಉತ್ತಮ ಕಾರ್ಯಗಳಲ್ಲಿ ಕೈ ಜೋಡಿಸಿದಾಗ ವಸುದೈವ ಕುಟುಂಬಕಮ್ ಎಂಬ ಮಾತು ಸಾಕಾರವಾಗುತ್ತದೆ. ಎಂದು ಹೇಳಿದರು.
ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಮಾತನಾಡಿ, 7 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಈ ವಿದ್ಯಾ ಸಂಸ್ಥೆ ಇಂದು ಒಂದು ದೊಡ್ಡ ಹೆಮ್ಮರವಾಗಿ ಬೆಳೆಯುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಒಂದು ಒಳ್ಳೆಯ ಗುರಿಯನ್ನು ಇಟ್ಟುಕೊಂಡು ಈ ಸಂಸ್ಥೆಯನ್ನು ಡಾ. ಕೆ.ಸಿ. ನಾಕ್ ಅವರು ಸ್ಥಾಪಿಸಿದ್ದಾರೆ. ಅವರ ಗುರಿ ಕನಸು ಆದಷ್ಟು ಬೇಗ ನೆರವೇರುವಂತಾಗಲಿ ಎಂದು ಹಾರೈಸಿದರು.
ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಮಾತನಾಡಿ, ಕುಟುಂಬ ಮಿಲನ ಎಂಬುವ ಪರಿಕಲ್ಪನೆಯನ್ನು ತಂದಂತಹ ಡಾ. ಕೆ.ಸಿ. ನಾಕ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ಕೆ.ಸಿ. ನಾಕ್ ಮಾತನಾಡಿ, ಈ ಸಂಸ್ಥೆಯ ಎಲ್ಲಾ ಸಿಬ್ಬಂಧಿಗಳು ನನ್ನ ಕಟುಂಬಸ್ಥರು, ಪ್ರತಿದಿನವೂ ಈ ವಿದ್ಯಾ ಸಂಸ್ಥೆಗಾಗಿ, ಇಲ್ಲಿನ ವಿದ್ಯಾರ್ಥಿಗಳ ಏಳಿಗೆಗಾಗಿ ದುಡಿಯುತ್ತಿರುವ ನನ್ನ ಕಟುಂಬದ ಸದಸ್ಯರೆಲ್ಲರನ್ನು ವರ್ಷದಲ್ಲಿ ಒಂದು ಒಟ್ಟು ಸೇರಿಸಿ ಸಂಭ್ರಮಿಸುವುದು ನನ್ನ ಆಸೆಯಾಗಿದೆ. ಈ ಸಂಸ್ಥೆಯು ಒಂದು ಖಾಸಗಿ ವಲಯದಲ್ಲಿ ನಡೆಯುತ್ತಿರುವ ಸಂಸ್ಥೆಯಾದರೂ ಇಲ್ಲಿ ಶ್ರಮಿಸುತ್ತಿರುವ ಸಿಬ್ಬಂದಿಗಳಿಗೆ ಪಿಂಚಣಿ ನೀಡುವ ಯೋಜನೆಯನ್ನು ಈ ಸಂದರ್ಭದಲ್ಲಿ ಇವರು ಘೋಷಿಸಿದರು. ಅಷ್ಟೇ ಅಲ್ಲದೆ ಪ್ರತಿಯೊಬ್ಬ ಸಿಬ್ಬಂದಿಗೂ ಹಾಗೂ ಅವರ ಕುಟುಂಬ ಸದಸ್ಯರಿಗೆ ತಲಾ 30 ಲಕ್ಷ ರೂಪಾಯಿ ಮೌಲ್ಯದ ಆರೋಗ್ಯ ವಿಮೆಯನ್ನು ಕೂಡ ನಮ್ಮ ಶಕ್ತಿ ಸಂಸ್ಥೆಯು ನೀಡಲು ಸಜ್ಜಾಗಿದೆ ಎಂದರು.
ಹೆಚ್.ಕೆ. ಪುರುಷೋತ್ತಮ ಮಾತನಾಡಿ, ಇಂದಿನ ಈ ಮೊಬೈಲ್ ಯುಗದಲ್ಲಿ ಒಂದು ಮಗುವಿಗೆ ಊಟ ತಿನ್ನಿಸುವಾಗಲು ಮೊಬೈಲ್ ತೋರಿಸಿ ಊಟ ಮಾಡಿಸುವ ಪರಿಸ್ಥಿತಿ ಬಂದಿದೆ. ಇಂತಹ ಸಂದರ್ಭದಲ್ಲಿ ಇಂದು ಡಾ. ಕೆ.ಸಿ. ನಾಕ್ ಅವರ ಈ ಶಕ್ತಿ ಕುಟುಂಬ ಮಿಲನ ಎನ್ನುವ ಪರಿಕಲ್ಪನೆ ಕುಟುಂಬದ ಮಹತ್ವವನ್ನು ಸಮಾಜಕ್ಕೆ ತಿಳಿಸಲು ಸಹಕಾರಿಯಾಗಿದೆ. ಈ ಶಕ್ತಿ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ ಎಂದು ಶುಭಹಾರೈಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಶಕ್ತಿ ವಿದ್ಯಾ ಸಂಸ್ಥೆಯ ಮುಖ್ಯ ಸಲಹೆಗಾರ ರಮೇಶ್ ಕೆ. ಅವರು, ಶಕ್ತಿ ವಿದ್ಯಾ ಸಂಸ್ಥೆಯು ಇಂದು ದೊಡ್ಡ ಪ್ರಮಾಣದಲ್ಲಿ ಹೆಸರುವಾಸಿಯಾಗುತ್ತಿದೆ. ಕೇವಲ ಕರ್ನಾಟಕದ ಜಿಲ್ಲೆಗಳಿಂದ ಮಾತ್ರವಲ್ಲದೆ ನಮ್ಮ ನೆರೆ ರಾಜ್ಯಗಳಿಂದಲೂ ಅದೆಷ್ಟೋ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆಗೋಸ್ಕರ ಬರುತ್ತಿದ್ದಾರೆ. ಈ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿಯಾಗಿರುವ ಡಾ. ಕೆ.ಸಿ. ನಾಕ್ ಅವರು ತನ್ನ 78ನೇ ವಯಸ್ಸಿಗೆ ಒಂದು ಶಿಕ್ಷಣ ಸಂಸ್ಥೆಯನ್ನು ತೆರೆದು ಇಲ್ಲಿನ ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಗಳ ಅಭಿವೃದ್ಧಿಗೋಸ್ಕರ ನಿರಂತರ ನವೋಲ್ಲಾಸದಿಂದ ಹಗಲಿರುಳು ಶ್ರಮಿಸುತ್ತಿದ್ದಾರೆ. ಸುಮಾರು 250ಕ್ಕೂ ಹೆಚ್ಚು ಕುಟುಂಬಗಳಿಗೆ ಇವರು ಆಸರೆಯಾಗಿದ್ದಾರೆ ಎಂದರು.
ಶಕ್ತಿ ವಿದ್ಯಾಸಂಸ್ಥೆ ಭಾರತಿಯ ಸಂಸ್ಕೃತಿ ಮೌಲ್ಯಗಳೊಂದಿಗೆ ಒಂದು ಮಗುವಿನ ಸವಾಂಗೀಣ ಅಭಿವೃದ್ಧಿಯಾಗಬೇಕು. ಆ ಮೂಲಕ ಆ ಮಗು ದೇಶದ ಆಸ್ತಿಯಾಗಬೇಕೆಂಬುದು ಶಕ್ತಿ ವಿದ್ಯಾ ಸಂಸ್ಥೆಯ ಉದ್ದೇಶ. ಈ ಹಿನ್ನಲೆಯ ಒಳಗಡೆ ಶಕ್ತಿ ಕುಟುಂಬ ಮಿಲನ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಆವಶ್ಯ ಫೌಂಡೇಶನ್ ಮುಂಬಯಿ ಇದೇ ಸಂದರ್ಭದಲ್ಲಿ 10 ಲಕ್ಷ ರೂ. ಸ್ಕಾಲರ್‌ಶಿಪ್‌ನ್ನು ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಆಲ್ ಕಾರ್ಗೊ ಸಂಸ್ಥೆ ಮಂಗಳೂರು ವಲಯ ಸಹಾಯಕ ವ್ಯವಸ್ಥಾಪಕರಾದ ಸವಿಸ್ತಾರ ಆಳ್ವ ಮಾತನಾಡಿ ಆವಶ್ಯ ಫೌಂಡೇಶನ್ ಮುಂಬೈ, ಶಕ್ತಿ ವಿದ್ಯಾ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 10ಲಕ್ಷ ರೂಪಾಯಿ ಸ್ಕಾಲರ್‌ಶಿಪ್ ವಿತರಣೆ ಮಾಡಲು ಮಂಗಳೂರಿನಿಂದ ಮುಂಬೈ ಹೋಗಿ ಅಲ್ಲಿ ಆಲ್‌ಕಾರ್ಗೊ ಲಾಜಿಸ್ಟಿಕ್ಸ್ ಉದ್ಯಮ ಪ್ರಾರಂಭ ಮಾಡಿರುವ ಡಾ. ಶಶಿಕಿರಣ್ ಶೆಟ್ಟಿಯವರೇ ಕಾರಣ. ಅವರು ಪರಿಶ್ರಮ ಪಟ್ಟು ಕಟ್ಟಿರುವ ಸಂಸ್ಥೆ ಇದು. ಜಗತ್ತಿನಾದ್ಯಂತ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಾವಿರಾರು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ 2024-25ನೇ ಸಾಲಿನಲ್ಲಿ ಶಾಲಾ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸಾಹಿತ್ಯ, ಭೋಧನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಗೌರವಿಸಲಾಯಿತು.
ನಂತರ ನೆರೆದಿದ್ದ ಎಲ್ಲಾ ಸಭಿಕರಿಗೆ ವಿವಿಧ ಮನರಂಜನಾತ್ಮಕ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಪ್ರಾಧ್ಯಾಪಕ ಸುನಿಲ್ ಪಲ್ಲಮಜಲು ನಿರೂಪಿಸಿ, ವಂದಿಸಿದರು.

















