ಇಂದಿಗೂ ನಮ್ಮಲ್ಲಿ ಅಶ್ಪೃಷ್ಯತೆ ಜೀವಂತವಾಗಿದೆ: ಸಿಎಂ ಸಿದ್ದರಾಮಯ್ಯ

ಇಂದಿಗೂ ನಮ್ಮಲ್ಲಿ ಅಶ್ಪೃಷ್ಯತೆ ಜೀವಂತವಾಗಿದೆ: ಸಿಎಂ ಸಿದ್ದರಾಮಯ್ಯ


ಮಂಗಳೂರು: ನಮಗೆ ಸ್ವಾತಂತ್ರ್ಯ ಬಂದು 79 ವರ್ಷವಾಗಿದ್ದರೂ, ಸಂವಿಧಾನ ಬಂದು 75 ವರ್ಷವಾಗಿದ್ದಾರೂ ಇಂದಿಗೂ ನಮ್ಮಲ್ಲಿ ಅಶ್ಪೃಷ್ಯತೆ ಜೀವಂತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೇರಳದ ವರ್ಕಲ ಶಿವಗಿರಿ ಮಠ, ಮಂಗಳೂರು ವಿಶ್ವವಿದ್ಯಾಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ’ಶತಮಾನದ ಮಹಾ ಪ್ರಸ್ಥಾನ ಬ್ರಹ್ಮಶ್ರೀ ನಾರಾಯಣ ಗುರು- ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದದ ಶತಮಾನೋತ್ಸವ, ಗುರುವಿನ ಮಹಾ ಸಮಾಧಿ ಶತಾಬ್ಧಿ, ಸರ್ವ ಮತ ಸಮ್ಮೇಳನದ ಶತಮಾನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ನಾಯಿಗೆ ಅದರ ಎದುರಿಗೆ ಮತ್ತೊಂದು ನಾಯಿ ಬಂದರೆ ಇದು ನಮ್ಮ ಜಾತಿಯದ್ದು ಎಂದು ಅರಿವಾಗುತ್ತದೆ. ಆದರೆ ಮನುಷ್ಯನ ಎದುರಿಗೆ ಮತ್ತೊಬ್ಬ ಬಂದರೆ ನೀನು ಯಾವ ಜಾತಿಯವನು ಎಂದು ಕೇಳುತ್ತಾನೆ. ಒಬ್ಬ ವ್ಯಕ್ತಿ ಯಾವಾಗಲೂ ಹುಟ್ಟಿನಿಂದ ದೊಡ್ಡವನಾಗಲೂ ಆಗುವುದಿಲ್ಲ. ಕೀಳಾಗಲೂ ಆಗುವುದಿಲ್ಲ ಎಂದರು.

ಆರ್ಥಿಕ, ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗದೇ, ಅಸಮಾನತೆ ಹೋಗಲಾಡಿಸದೆ, ಗುಲಾಮಗಿರಿ ವ್ಯವಸ್ಥೆಯನ್ನು ಕಿತ್ತೆಸೆಯದೇ ಸ್ವಾತಂತ್ರ್ಯ ಯಶಸ್ವಿಯಾಗಲು ಸಾಧ್ಯವಿಲ್ಲ. ಆದುದರಿಂದಲೇ ನಾರಾಯಣ ಗುರುಗಳು ಶಿಕ್ಷಿತರಾಗಿ ಶಿಕ್ಷಣದೊಂದಿಗೆ ಜ್ಞಾನಿಗಳಾಗಿ, ಜ್ಞಾನದಿಂದ ಸಂಘಟಿತರಾಗಿ ಎಂದು ಹೇಳಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ, ಸಂವಿಧಾನ ಜಾರಿಗೆ ಬಂದು 75 ವರ್ಷಗಳಾದರೂ ಇನ್ನೂ ಗುಲಾಮಗಿರಿ ವ್ಯವಸ್ಥೆ ಬದಲಾಗಿಲ್ಲ. ಪ್ರಬಲ ಸಮುದಾಯದ ವ್ಯಕ್ತಿ ಎದುರಾದಾಗ ಸ್ವಾಮಿ ಎನ್ನುವ, ದಲಿತ ಸಮುದಾಯದ ವ್ಯಕ್ತಿ ಎಷ್ಟೇ ಶ್ರೀಮಂತರಾದರೂ ಅವರನ್ನು ಏಕ ವಚನದಲ್ಲಿ ಮಾತನಾಡಿಸುವ ವ್ಯವಸ್ಥೆ ಈಗಲೂ ಇದೆ. ಇದೇ ಗುಲಾಮಗಿರಿಯ ಸಂಕೇತ. ಇದನ್ನು ಕಿತ್ತೆಸೆಯದೇ ಸ್ವಾಭಿಮಾನ ಮೂಡಿಸಲು ಸಾಧ್ಯವಿಲ್ಲ. ಇದನ್ನೇ ನಾರಾಯಣಗುರುಗಳು ಸಾರಿ ಸಾರಿ ಹೇಳಿದ್ದಾರೆ’ ಎಂದರು.

‘ಜಾತಿಯಿಂದ ಯಾರೂ ದೊಡ್ಡವರಾಗುವುದಿಲ್ಲ. ಯಾರೂ ಕೀಳೂ ಆಗುವುದಿಲ್ಲ. ಆದರೆ ವ್ಯಕ್ತಿತ್ವವನ್ನೂ ಜಾತಿ ನೋಡಿಯೇ ಅಳೆಯಲಾಗುತ್ತಿದೆ. ಸಮಾಜದಲ್ಲಿ ಜಾತಿ ಹೆಸರಿನಲ್ಲಿ ನಡೆಯುವ ತಾರತಮ್ಯಗಳು ದೂರವಾಗಬೇಕು. ಜಡತ್ವದ ಜಾತಿ ವ್ಯವಸ್ಥೆ ಬದಲಾಗಬೇಕು. ಅದಕ್ಕಾಗಿ ಮನುಷ್ಯತ್ವದಿಂದ ಕೂಡಿದ ಸಮಾಜ ಕಟ್ಟಬೇಕು’ ಎಂದರು.

’1925ರಲ್ಲಿ ನಡೆದ ಮಹಾತ್ಮ ಗಾಂಧಿ ನಾರಾಯಣಗುರುಗಳ ನಡುವಿನ ಸಂವಾದ ಹಾಗೂ 1931ರಲ್ಲಿ ಗಾಂಧಿ ಮತ್ತು ಬಿ.ಆರ್.ಅಂಬೇಡ್ಕರ್ ನಡುವೆ ನಡೆದ ಸಂವಾದಗಳಿಗೆ ಐತಿಹಾಸಿಕ ಮಹತ್ವವಿದೆ. ಅವರು ಪ್ರತಿಪಾದಿಸಿದ ಮೌಲ್ಯಗಳ ಹಿಂದಿನ ಆಶಯ ಅರ್ಥ ಮಾಡಿಕೊಳ್ಳಬೇಕು. ಜಾತಿ ಧರ್ಮಗಳನ್ನು, ಮೀರಿ ಮನುಷ್ಯರಾಗಿ ಬಾಳಬೇಕು. ಸಂವಿಧಾನ ದಲ್ಲಿ ಅಳವಡಿಸಿಕೊಂಡ ಸಹಬಾಳ್ವೆ, ಧರ್ಮ ಸಹಿಷ್ಣುತೆ ಭಾವನೆ ಬೆಳೆಸಿಕೊಂಡರೆ, ಸಾಮಾಜಿಕ ಅಸಮಾನತೆ ನಿವಾರಣೆ ಆಗಲಿದೆ ಎಂದರು.

’ಶಸ್ತ್ರಚಿಕಿತ್ಸೆಗೆ ಕುರುಬರದ್ದೇ ರಕ್ತ ಬೇಕು ಎಂದು ನಾನು ಕೇಳುವುದಿಲ್ಲ. ದಲಿತರ, ಕ್ರೈಸ್ತರ, ಮುಸ್ಲೀಮರ ರಕ್ತವಾದರೂ ಆಗುತ್ತದೆ. ಆದರೆ, ವಾಸಿ ಆದ ಬಳಿಕ ನೀವು ಯಾವ ಜಾತಿ, ಯಾವ ಧರ್ಮಎಂದು ಕೇಳುತ್ತೇವೆ. ಅಷ್ಟರಮಟ್ಟಿಗೆ ನಾವು ಸ್ವಾರ್ಥಿಗಳು. ಇದನ್ನು ಬಿಡಬೇಕು.ಜಾತಿ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸ ಆಗಬಾರದು. ಎಲ್ಲರೂ ಮಾನವರಾಗಿ ಬದುಕಬೇಕು’ ಎಂದರು

’ನಾರಾಯಣ ಗುರುಗಳ ಸಂದೇಶ ಎಲ್ಲರಿಗೂ ತಲುಪಬೇಕು ಎಂಬ ಕಾರಣಕ್ಕೆ 2016ರಲ್ಲಿ ನಮ್ಮ ಸರ್ಕಾರ ಅವರ ಜಯಂತಿ ಆಚರಿಸಲು ತೀರ್ಮಾನಿಸಿತ್ತು’ ಎಂದರು.

ಕೇರಳದ ವರ್ಕಲ ಶಿವಗಿರಿ ಮಠದವರು ರಾಜ್ಯದಲ್ಲಿ ಶಾಖಾ ಮಠವನ್ನು ಆರಂಭಿಸಲು 5 ಎಕರೆ ಜಮೀನು ಕೇಳಿದ್ದಾರೆ. ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯಲ್ಲಿ ಜಾಗ ಗುರುತಿಸಲು ಸೂಚಿಸಿದ್ದೇನೆ. ನಮ್ಮ ಸರ್ಕಾರ ಶಿವಗಿರಿ ಶಾಖಾ ಮಠ ಸ್ಥಾಪನೆಗೆ ಜಮೀನು ನೀಡಲು ಸಿದ್ಧವಿದೆ ಎಂದರು.

ಲೋಕಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಈಗಲೂ ಸಮಾಜದಲ್ಲಿ ಗಂಭಿರ ಪ್ರಮಾಣದಲ್ಲಿ ಅಸಮಾನತೆ ಇದೆ. ಸಂವಿಧಾನದ ಮೌಲ್ಯಗಳು ಬೆದರಿಕೆ ಎದುರಿಸುತ್ತಿವೆ. ನಾರಾಯಣಗುರು- ಗಾಂಧೀಜಿ ಅನುಯಾಯಿಗಳು ಅವರ ತತ್ವಗಳ ಅನುಷ್ಠಾನಕ್ಕೆ ಪ್ರಯತ್ನಿಸಬೇಕು’ ಎಂದರು. 

ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌ಮಾತನಾಡಿ, ‘ಇಂದು ಒಂದು ದಿನಕ್ಕೆ ಸೀಮಿತವಾದ ಕಾರ್ಯಕ್ರಮವಲ್ಲ. ಇದರ ಸಂದೇಶ ವಿದ್ಯಾರ್ಥಿಗಳಿಗೆ, ಯುವ ಪೀಳಿಗೆಗೆ ತಲುಪಬೇಕು. ಈ ಐತಿಹಾಸಿಕ ಕಾರ್ಯಕ್ರಮದ ನೆನಪು ಸದಾ ಹಸಿರಾಗಿರುವಂತೆ ಮಾಡಲು ಈ ಮೈದಾನಕ್ಕೆ ಗುರು-ಗಾಂಧಿ ಮೈದಾನ ಎಂದು ನಾಮಕರಣ ಮಾಡಲಿದ್ದೇವೆ. ಇಲ್ಲಿ ಉದ್ಯಾನ, ಕ್ರೀಡಾಂಗಣ ಅಭಿವೃದ್ದಿ ಪಡಿಸಲಿದ್ದೇವೆ ಎಂದರು.

ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ ಹಾಗೂ ಶಿವಗಿರಿ ಮಠದ ಕಾರ್ಯದರ್ಶಿ ಶುಭಾಂಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾರ್ಯಕ್ರಮ ಆಯೋಜನೆ ಕೇಂದ್ರ ಸಮಿತಿಯ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಪ್ರಾಸ್ತವಿಕವಾಗಿ ಮಾತನಾಡಿ, 2013ರಲ್ಲಿ ನಾನು ರಾಜ್ಯಸಭಾ ಸದಸ್ಯನಾಗಿದ್ದ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯಲ್ಲಿ ನಾರಾಯಣಗುರು ಅಧ್ಯಾಯನ ಪೀಠ ಸ್ಥಾಪನೆಯಾಗಬೇಕು ಎಂದು ಚರ್ಚೆಯಾಗಿ ನನಲ್ಲಿಗೆ ಬಂದಾಗ ನಾನು 50 ಲಕ್ಷ ರೂ. ನೀಡಿದ್ದೆ. ನಂತರದಲ್ಲಿ ನಳಿನ್ ಕುಮಾರ್ ಕಟೀಲ್ ಹಾಗೂ ಹರೀಶ್ ಕುಮಾರ್ ತಲಾ 10 ಲಕ್ಷ ನೀಡಿದರು ಬಳಿಕ ನಾನು ವಿಧಾನ ಪರಿಷತ್ ಸದಸ್ಯನಾದ ನಂತರ ಮತ್ತೆ 30 ಲಕ್ಷ ನೀಡಿದೆ. ಬಳಿಕ ಮುಖ್ಯಮಂತ್ರಿಗಳಲ್ಲಿ ಕೇಳಿದಾಗ 2 ಕೋಟಿ ನೀಡಿದರು. ಈಗ ಮುಖ್ಯಮಂತ್ರಿಗಳು ಶಿವಗಿರಿ ಮಠಕ್ಕೆ ಐದು ಎಕ್ಕರೆ ಜಾಗ ನೀಡಲು ಮುಂದಾಗಿರುವುದು ಅಭಿನಂದನಾರ್ಹ ಎಂದರು.

ಗೃಹಸಚಿವ ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಲಕ್ಷ್ಮೀ ಹೆಬ್ಬಾಳಕರ್, ವಸತಿ ಮತ್ತು ವಕ್ಪ್ ಸಚಿವ ಬಿ.ಜೆಡ್.ಜಮೀರ್ ಅಹಮದ್ ಖಾನ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸಂಸದ ರಾಜಮೋಹನ್ ಉನ್ನಿತಾನ್, ಪ್ರಧಾನ ಸಂಚಾಲಕ ಪಿ.ವಿ.ಮೋಹನ್, ಮುಖಂಡ ಬಿ.ಜನಾರ್ಧನ ಪೂಜಾರಿ, ದಕ್ಷಿಣ ಕನದನಡ ಜಿಲ್ಲೆಯ ಶಾಸಕರು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article