ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಮಹಿಳಾ ತಂಡ ಚಾಂಪಿಯನ್
Tuesday, December 16, 2025
ಮೂಡುಬಿದಿರೆ: ಬೆಂಗಳೂರಿನ ಸಹ್ಯಾದ್ರಿ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಆಹ್ವಾನಿತ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೂಡಬಿದಿರೆಯ ಆಳ್ವಾಸ್ ಮಹಿಳಾ ತಂಡವು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.
ಭಾನುವಾರ ಮುಕ್ತಾಯಗೊಂಡ ಈ ಟೂರ್ನಿಯಲ್ಲಿ ರಾಜ್ಯದ ಆಹ್ವಾನಿತ ಎಂಟು ಪ್ರಬಲ ತಂಡಗಳು ಭಾಗವಹಿಸಿದ್ದವು. ಫೈನಲ್ ಹಣಾಹಣಿಯಲ್ಲಿ ಆಳ್ವಾಸ್ ತಂಡವು ಬೆಂಗಳೂರಿನ ರಾಜರಾಜೇಶ್ವರಿ ಕ್ಲಬ್ ತಂಡವನ್ನು ಎದುರಿಸಿತು. ಪ್ರಬಲ ಪೈಪೋಟಿಯ ನಡುವೆಯೂ ಆಳ್ವಾಸ್ ತಂಡವು 35-14 ಮತ್ತು 35-22 ಎಂಬ ನೇರ ಸೆಟ್‌ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಫೈನಲ್ ಪ್ರವೇಶಿಸುವ ಮುನ್ನ ಆಳ್ವಾಸ್ ತಂಡವು ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಜಯ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ನೇರ ಸೆಟ್‌ಗಳಿಂದ ಸೋಲಿಸಿ ಅಂತಿಮ ಹಂತಕ್ಕೆ ತಲುಪಿತ್ತು. ಆಳ್ವಾಸ್ ತಂಡದ ಆಟಗಾರ್ತಿ ಕೃಪಾ ಟೂರ್ನಿಯ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸಾಧಕ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ.