ಅಶೋಕ್ ರೈ ವಿರುದ್ಧ ಪ್ರಕರಣ-ಹಿಂಪಡೆಯಲು ಬ್ಲಾಕ್ ಕಾಂಗ್ರೆಸ್ ಆಗ್ರಹ: ಧಾರ್ಮಿಕ ನೆಲೆಯಲ್ಲಿ ಕೋಳಿಅಂಕ-ವಿಕೋಪದ ಎಚ್ಚರಿಕೆ
ಪುತ್ತೂರು: ವಿಟ್ಲ ಕೇಪು ಜಾತ್ರೆಯ ಹಿನ್ನಲೆಯಲ್ಲಿ ಸುಮಾರು 400 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಸಾಂಪ್ರದಾಯಿಕ ಕೋಳಿಅಂಕ ವಿಚಾರಕ್ಕೆ ಸಂಬಂಧಿಸಿ ಪುತ್ತೂರಿನ ಶಾಸಕ ಅಶೋಕ್ ರೈ ಅವರ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನೀಯ. ತಕ್ಷಣ ಈ ಮೊಕದ್ದಮೆಯನ್ನು ಹಿಂದೆ ಪಡೆಯಬೇಕು. ಇಲ್ಲವಾದರೆ ಮುಂದೆ ಆಗುವ ಪರಿಣಾಮಗಳಿಗೆ ನೇರವಾಗಿ ಪೊಲೀಸ್ ಇಲಾಖೆಯೇ ಹೊಣೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಮಾದ್ಯಮಗಳೊಂದಿಗೆ ಅವರು ಮಾತನಾಡಿ, ಕೇಪು ಜಾತ್ರೆಯಲ್ಲಿ ಪಾರಂಪರಿಕವಾಗಿ ಜೂಜು ರಹಿತ ಕೋಳಿ ಅಂಕ ಧಾರ್ಮಿಕ ಹಿನ್ನೆಲೆಯಲ್ಲಿ ನಡೆಸುತ್ತಿರುವಾಗ ವಿಟ್ಲ ಪೊಲೀಸರು ಸ್ಥಳಕ್ಕೆ ಬಂದು ಜನರ ಮೇಲೆ ಕೈ ಮಾಡುವ ಮೂಲಕ ದೌರ್ಜನ್ಯ ಎಸಗಿದ್ದರು. ಆ ಬಳಿಕ ಶಾಸಕರಾದ ಅಶೋಕ್ ರೈ ಅವರು ಅಲ್ಲಿಗೆ ಭೇಟಿ ನೀಡಿದ್ದು, ಕೋಳಿಅಂಕವನ್ನು ಪುನಾರಂಭಿಸಲಾಗಿತ್ತು. ಈ ಸಂದರ್ಭ ಶಾಸಕರು ಮಾತನಾಡಿದಾಗ ಕೋಳಿ ಅಂಕದಲ್ಲಿರುವ ಜನರ ಮೇಲೆ ದೌರ್ಜನ್ಯ ಎಸಗಬಾರದು. ಹಾಗೆ ಮಾಡಿದಾಗ ಜನರ ಕೈಯಲ್ಲಿ ಕೋಳಿಗಳಿಗೆ ಕಟ್ಟುವ ಬಾಲು ಮತ್ತಿತರ ವಸ್ತುಗಳಿದ್ದು, ಅಪಾಯ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಪೊಲೀಸರು ಜಾಗ್ರತೆ ವಹಿಸಬೇಕು ಎಂದು ಎಚ್ಚರಿಕೆ ನೀಡಿದ್ದರು. ಸಾಂಪ್ರದಾಯಿಕ ನೆಲೆಯಲ್ಲಿ ನಡೆಯುವ ಕೋಳಿಅಂಕಕ್ಕೆ ಯಾವುದೇ ತೊಂದರೆ ಮಾಡಬಾರದು ಎಂದೂ ಸೂಚಿಸಿದ್ದರು. ಆದರೆ ವಿಟ್ಲ ಪೊಲೀಸರು ಶಾಸಕರ ವಿರುದ್ಧವೇ ಮೊಕದ್ದಮೆ ದಾಖಲಿಸಿದ್ದಾರೆ.
ಕೋಳಿ ಅಂಕ ರೈತವರ್ಗದ ಮನೋರಂಜನೆಯ ಆಟವಾಗಿದೆ. ಧಾರ್ಮಿಕ ಹಿನ್ನೆಲೆಯಲ್ಲಿ ಇದು ನಡೆಯುತ್ತದೆ. ಆದರೆ ಇದಕ್ಕೆ ತಡೆ ಒಡ್ಡುವ ಕೆಲಸ ಮಾಡುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಿದೆ. ಇದು ಸರಿಯಲ್ಲ ಎಂದು ಹೇಳಿದ ಶಾಸಕರ ಮೇಲೆ ಹೂಡಿರುವ ಮೊಕದ್ದಮೆಯನ್ನು ಪೊಲೀಸ್ ಮಹಾನಿರ್ದೇಶಕರು ತಕ್ಷಣ ಹಿಂಪಡೆಯಬೇಕು. ಇಲ್ಲವಾದರೆ ಕಾರ್ಯಕರ್ತರು ಹಾಗೂ ಜನಸಾಮಾನ್ಯರು ಶಾಸಕರ ಪರವಾಗಿ ಬರುತ್ತಾರೆ. ಇದರಿಂದ ಪರಿಸ್ಥಿತಿ ಹಾಳಾದರೆ ಪೊಲೀಸ್ ಇಲಾಖೆಯ ತಪ್ಪು ನಿರ್ಧಾರದಿಂದಾಗುವ ಸಮಸ್ಯೆಗೆ ಅವರೇ ಹೊಣೆಗಾರರು ಎಂದು ಅವರು ತಿಳಿಸಿದ್ದಾರೆ.