ಭಾರತೀಯ ಸೇನೆಯಲ್ಲಿ ಸೇವೆ ನೀಡಲು ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಪ್ರೇರಣೆ ನೀಡಬೇಕು: ಅನಂತಪದ್ಮನಾಭ ನಾಯಕ್
ಅವರು ಭಾನುವಾರ ಶತಮಾನೋತ್ಸವ ವರ್ಷದ ಸಂಭ್ರಮದಲ್ಲಿರುವ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿ.ಪ್ರಾ. ಶಾಲಾ ಹಳೆವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಕ್ರೀಡೋತ್ಸವದ ಶುಭಾವಸರದಲ್ಲಿ ಶಾಲಾ ಆವರಣದಲ್ಲಿ ನಿವೃತ್ತ ಯೋಧರೋರ್ವರು ಕೊಡುಗೆಯಾಗಿ ನೀಡಿದ ಸೇನಾ ಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸುವ ‘ಅಮರ್ ಜವಾನ್’ ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದರು.
ಕಾಪು ತಾಲೂಕಿನಲ್ಲಿಯೇ ಪ್ರಪ್ರಥಮವಾಗಿ ಶಾಲಾ ಆವರಣದಲ್ಲಿ ‘ಅಮರ್ ಜವಾನ್’ ಸ್ಮಾರಕ ನಿರ್ಮಿಸಿರುವುದು ಶ್ಲಾಘನೀಯ ಎಂದ ಅವರು ಎಲ್ಲಾ ಶಾಲಾ ಕಾಲೇಜುಗಳ ಆವರಣದಲ್ಲಿ ‘ಅಮರ್ ಜವಾನ್’ ಸ್ಮಾರಕಗಳನ್ನು ನಿರ್ಮಿಸಿ ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸುವ, ಹಾಗೂ ಸೇನೆಗೆ ಸೇರುವಂತೆ ಪ್ರೇರಣೆ ನೀಡುವ ಕಾರ್ಯ ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರುಗಳಾದ ಅನಂತಪದ್ಮನಾಭ ನಾಯಕ್, ರಾಜೇಂದ್ರ ಪ್ರಭು ಕೋಡುಗುಡ್ಡೆ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಾಲಾ ಹಳೆವಿದ್ಯಾರ್ಥಿ ರಾಜೇಂದ್ರ ಪ್ರಭು ಪೊದಮಲೆ ಇವರನ್ನು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮಾಧವ ಕಾಮತ್, ಶಾಲಾ ಸಂಚಾಲಕ ರಾಮದಾಸ ಪ್ರಭು, ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಗಂಪದಬೈಲು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ ಸನ್ಮಾನಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಆರ್. ಪಾಟ್ಕರ್ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಆರ್. ಪಾಟ್ಕರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಮಿತಿಯ ಸದಸ್ಯ ದೇವದಾಸ್ ಪಾಟ್ಕರ್ ನಿರೂಪಿಸಿ, ವಂದಿಸಿದರು. ಶಾಲಾ ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ಶಾಲಾಭಿಮಾನಿಗಳು ಉಪಸ್ಥಿತರಿದ್ದರು.