ರೈತರ ಕಲ್ಯಾಣವೇ ಸರಕಾರದ ಧ್ಯೇಯ: ಬ್ರಿಜೇಶ್ ಚೌಟ
ಸುಳ್ಯ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಆತ್ಮ ಯೋಜನೆ ಕಿಸಾನ್ ಗೋಷ್ಠಿ ಘಟಕದಡಿ ವಿಜ್ಞಾನಿಗಳು, ಪ್ರಗತಿಪರ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಾಧಕ ರೈತರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಆಧುನಿಕ ಜಗತ್ತಿಗೆ ತಕ್ಕಂತೆ ಕೃಷಿ ಕ್ಷೇತ್ರದಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜೈ ಜವಾನ್, ಜೈ ಕಿಸಾನ್ ಜತೆ ಜೈ ವಿಜ್ಞಾನ್ ಮತ್ತು ಜೈ ಅನುಸಂಧಾನ್ ಜಾರಿಗೆ ಮಾಡಲಾಗಿದೆ. ರೈತರು ಗಟ್ಟಿಯಾದರೆ ಗ್ರಾಮ, ರಾಜ್ಯ, ದೇಶ ಸದೃಢವಾಗುತ್ತದೆ ಎಂದರು.ಕಿಸಾನ್ ಸಮ್ಮಾನ್ ಯೋಜನೆ ಸೇರಿ ನೇರವಾಗಿ ಯೋಜನೆಗಳನ್ನು ರೈತರಿಗೆ ನೀಡುವ ಯೋಜನೆ, ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಬೆಳೆ ವಿಮೆ ಸಮಸ್ಯೆ ಪರಿಹಾರ ಪ್ರಯತ್ನ:
ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಸರಿಯಾದ ಪ್ರಮಾಣದಲ್ಲಿ ಬರದೇ ಅನ್ಯಾಯ ಆಗಿದೆ. ಅದರ ಗೊಂದಲ ನಿವಾರಣೆ ಹಾಗೂ ಇದರಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಕೇಂದ್ರ ಹಾಗೂ ರಾಜ್ಯ ಸರಕಾರದ ಜತೆ ಮಾತನಾಡಿ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದ ಅವರು ಜಿಲ್ಲೆಯಲ್ಲಿ ಅಡಿಕೆ ಹಳದಿ ಎಲೆ ರೋಗ, ಎಲೆಚುಕ್ಕಿ ರೋಗದ ಸಮಸ್ಯೆ ಕುರಿತು ಕೃಷಿ ಸಚಿವರ ಗಮನಕ್ಕೆ ತರಲಾಗಿದೆ, ಪ್ರದೇಶದಲ್ಲಿ ಎಷ್ಟು ಕೃಷಿ ನಷ್ಟ ಆಗಿದೆ ಅದರ ಸರ್ವೆ ನಡೆಯುತ್ತಿದೆ. ಅದರ ವರದಿ ಸಚಿವರಿಗೆ ನೀಡಲಾಗುವುದು. ಮುಂದಿನ ದಿನದಲ್ಲಿ ಕೇಂದ್ರ ಕೃಷಿ ಸಚಿವರು ಸುಳ್ಯಕ್ಕೆ ಬಂದು ಇಲ್ಲಿ ಕೃಷಿಕರೊಂದಿಗೆ ಈ ಕುರಿತು ಸಂವಾದ ನಡೆಸಲಿದ್ದಾರೆ ಎಂದು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬೆಳೆ ವಿಮೆ ಪರಿಹಾರ ಬಂದುದರಲ್ಲಿ ಇಲ್ಲಿಯ ರೈತರಿಗೆ ಅನ್ಯಾಯ ಆಗಿದೆ. ಕಾಡು ಪ್ರಾಣಿಗಳ ಹಾವಳಿ, ಕೃಷಿಗಳ ರೋಗದಿಂದ ರೈತರು ತತ್ತರಿಸಿದ್ದಾರೆ. ಆದುದರಿಂದ ರೈತನಿಗೆ ಸರಿಯಾದ ರೀತಿಯಲ್ಲಿ ವಿಮೆ ಸಿಗುವಂತೆ ಮಾಡಬೇಕು. ಎಂದು ಹೇಳಿದರು.
ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ. ಕುಸುಮಾಧರ, ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಚಂದ್ರಾ ಕೋಲ್ಟಾರ್, ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಮ ಅಡ್ಪಂಗಾಯ, ಸುಳ್ಯ ತಹಸೀಲ್ದಾರ್ ಮಂಜುಳಾ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಹಾನ, ಸುಳ್ಯ ಸಿ.ಎ. ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಸುದರ್ಶನ ಸೂರ್ತಿಲ, ಸುಳ್ಯ ರೈತ ಉತ್ಪಾದಕ ಕಂಪೆನಿಯ ಸಿ.ಇ.ಒ. ಹರೀಶ್ ಇದ್ದರು.
ಕಾರ್ಯಕ್ರಮದಲ್ಲಿ ಸಿಪಿಸಿಆರ್‌ಐ ವಿಜ್ಞಾನಿ ಡಾ.ನಾಗರಾಜ್ ಅವರು ಅಡಿಕೆ ಉದ್ಯಮದಲ್ಲಾಗುವ ತೊಂದರೆ, ಹೊಸ ತಳಿ ಇತ್ಯಾದಿಗಳ ಕುರಿತು ಮಾಹಿತಿ ನೀಡಿದರೆ, ಹನಿ ನೀರಾವರಿ ಕುರಿತು ಜೈನ್ ಇರಿಗೇಷನ್ ಸಿಸ್ಟಮ್ ಲಿ. ನ ತಾಂತ್ರಿಕ ಅಧಿಕಾರಿ ದೇವರಾಜ್ ಮಾಹಿತಿ ನೀಡಿ ರೈತರೊಂದಿಗೆ ಸಂವಾದ ನಡೆಸಿದರು.
ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ಸ್ವಾಗತಿಸಿದರು. ಕೃಷಿ ಇಲಾಖೆಯ ಉಪ ನಿರ್ದೇಶಕ ಶಿವಶಂಕರ್ ಹೆಚ್.ದಾನೇಗೌಡರ್ ಪ್ರಾಸ್ತಾವಿಕ ಮಾತನಾಡಿದರು. ಸುಳ್ಯ ರೈತ ಉತ್ಪಾದಕ ಕಂಪೆನಿಯ ನಿರ್ದೇಶಕಿ ಮಧುರಾ ಎಂ.ಆರ್. ಕಾರ್ಯಕ್ರಮ ನಿರೂಪಿಸಿದರು.
ರೈತರಿಗೆ ಸನ್ಮಾನ:
ಸಮಾರಂಭದಲ್ಲಿ ಅತ್ಯುತ್ತಮ ಪ್ರಗತಿಪರ ಕೃಷಿ ಮಾಡುವ ೬ ಮಂದಿ ರೈತರನ್ನು ಸನ್ಮಾನಿಸಲಾಯಿತು. ಪದ್ಮನಿ ಡಿ.ಎಸ್., ಶಂಕರ ಕೆ. ಅಡ್ಡಣಪಾರೆ, ಕರುಣಾಕರ ಎ., ಹಿಮಕರ ಕುಕ್ಕುಡೇಲು, ನವೀನ್ ಚಂದ್ರ ಚಾತುಬಾಯಿ, ಪ್ರಕಾಶ ಮುಂಡೋಡಿ ಅವರನ್ನು ಸನ್ಮಾನಿಸಲಾಯಿತು. ಇದೇ ಕೃಷಿ ಭಾಗ್ಯ ಹಸ್ತಪ್ರತಿಯನ್ನು ಸಂಸದರು ಬಿಡುಗಡೆ ಮಾಡಿದರು. ಕೃಷಿ ಕೆಲಸ ಮಾಡುವಾಗ ಆಕಸ್ಮಿಕ ಮರಣ ಸಂಬಂಧಿಸಿದ ನಾಲ್ವರ ಕುಟುಂಬಕ್ಕೆ ೨ ಲಕ್ಷದಂತೆ ಕೃಷಿ ಇಲಾಖೆಯಿಂದ ಪರಿಹಾರ ಮೊತ್ತ ವಿತರಿಸಲಾಯಿತು.