ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ: ರಾಜ್ಯ ಮಟ್ಟದ ಮಹಿಳೆಯರ ತ್ರೋಬಾಲ್ ಪಂದ್ಯಾಟ: ಅತೀಥೇಯ ಮಂಗಳೂರು ವಲಯಕ್ಕೆ ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿ
ರಾಜ್ಯ ಮಟ್ಟದ ಮಹಿಳೆಯರ ತ್ರೋಬಾಲ್ ಪಂದ್ಯಾಟವನ್ನು ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಉದ್ಘಾಟಿಸಿ, ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದಾರೆ. ನಾವು ಪರಿಶ್ರಮ ಮತ್ತು ಪರಿಣತಿಯಿಂದ ಮುಂದೆ ಸಾಗಬೇಕು. ದೃಢತೆ ಮತ್ತು ಛಲವೊಂದಿದ್ದರೆ ಗೆಲುವು ಸಾಧ್ಯ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಹಿಳಾ ಪ್ರತಿಭೆಗಳು ಮತ್ತಷ್ಟು ಹೆಚ್ಚಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಟಿ. ಮಾತನಾಡಿ, ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡೆಗೆ ವಿಶೇಷ ಆದ್ಯತೆ ಇದೆ. ಈ ಕಾರಣದಿಂದಾಗಿಯೇ ಇಂದು ಎಸ್.ಡಿ.ಎಂ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕ್ರೀಡಾಳುಗಳು ಸ್ಪರ್ಧೇಗಳನ್ನು ಎದುರಿಸಿದಂತೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು. ಆಗ ನಮ್ಮ ಆತ್ಮ ವಿಶ್ವಾಸ ದೃಢವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಸೇರಿದಂತೆ ಗಣ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ತೀರ್ಪುಗಾರರು ಭಾಗಿಯಾಗಿದ್ದರು.
ವಿದ್ಯಾರ್ಥಿನಿ ನಿವೇದಿತಾ ನಿರೂಪಿಸಿದರು. ಅಪೇಕ್ಷಾ ಸ್ವಾಗತಿಸಿ, ಅರ್ಚನ ವಂದಿಸಿದರು. 3 ದಿನಗಳ ಅಂತರ್ ಕಾಲೇಜು ಮತ್ತು ರಾಜ್ಯ ಮಟ್ಟದ ತ್ರೋಬಾಲ್ ಪಂದ್ಯಾಟವನ್ನು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಪ್ರಭಾಕರ್ ಸಂಯೋಜಿಸಿದರು.
ಪ್ರಶಸ್ತಿಗಳ ವಿವರ:
ಅಂತಿಮ ದಿನದ ರಾಜ್ಯ ಮಟ್ಟದ ಮಹಿಳೆಯರ ತ್ರೋಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರು, ಮೈಸೂರು, ಮಂಡ್ಯ, ಚಿಕ್ಕ ಬಳ್ಳಾಪುರ, ಮಂಗಳೂರು ಸೇರಿದಂತೆ 15 ವಿವಿಧ ಜಿಲ್ಲೆಗಳ ಕಾಲೇಜಿನ ಮಹಿಳೆಯರ ತಂಡವು ಭಾಗವಹಿಸಿದ್ದು, ರಾಜ್ಯ ಮಟ್ಟದ ಫೈನಲ್ ಪಂದ್ಯಾಟಕ್ಕೆ ದಕ್ಷಿಣ ಕನ್ನಡದ ಮಂಗಳೂರು ತಂಡಗಳೇ ಪ್ರವೇಶ ಪಡೆದವು. ಅಂತಿಮ ಪಂದ್ಯದಲ್ಲಿ ಮಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನ ಮಹಿಳಾ ತಂಡ ಪ್ರಥಮ ಸ್ಥಾನ ಪಡೆದು, ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ಮಹಿಳಾ ತಂಡ ದ್ವೀತಿಯ ಸ್ಥಾನ ಪಡೆಯಿತು. ತೃತೀಯ ಸ್ಥಾನವನ್ನು ಚಿಕ್ಕಬಳ್ಳಾಪುರದ ಎಸ್.ಜೆ.ಸಿ.ಐಟಿ ಕಾಲೇಜಿನ ಮಹಿಳಾ ತಂಡವು ಪಡೆಯಿತು. ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಹಿಳಾ ತಂಡ ಚತುರ್ಥ ಸ್ಥಾನ ಪಡೆಯಿತು.
ವೈಯಕ್ತಿಕ ಪ್ರಶಸ್ತಿಗಳ ಭಾಗವಾಗಿ ರಾಜ್ಯ ಮಟ್ಟದ ಮಹಿಳೆಯರ ತ್ರೋಬಾಲ್ ಪಂದ್ಯಾವಳಿಯಲ್ಲಿ ಸೈಂಟ್ ಜೋಸೆಫ್ ಕಾಲೇಜಿನ ನಿಶಾ ಆಲ್ ರೌಂಡರ್, ಭೂಮಿಕಾ ಉತ್ತಮ ರಿಸೀವರ್ ಹಾಗೂ ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿನಿ ಕುಶಿ ಉತ್ತಮ ಎಸೆತಗಾರ್ತಿ ಪ್ರಶಸ್ತಿ ಪಡೆದರು. ಅಂತರ್ ಕಾಲೇಜು ಮಂಗಳೂರು ವಿಭಾಗಮಟ್ಟದ ಪಂದ್ಯದಲ್ಲಿ ಉತ್ತಮ ಆಲ್ ರೌಂಡರ್ ಆಗಿ ಸೈಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿನಿ ಡಿಯೋನಾ, ಉತ್ತಮ ರಿಸೀವರ್ ಆಗಿ ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ದಿಯಾ ಹಾಗೂ ಉತ್ತಮ ಎಸೆತ ಪ್ರಶಸ್ತಿಯನ್ನು ಉಜಿರೆಯ ಎಸ್.ಡಿ.ಎಂ ಐಟಿ ಕಾಲೇಜಿನ ರಕ್ಷಿತಾ ಪಡೆದುಕೊಂಡರು.
ಮೊದಲನೆಯ ದಿನದ ಆರಂಭ ಪಂದ್ಯದಲ್ಲಿ ಮಂಗಳೂರು, ಸುಳ್ಯ, ಮೂಡುಬಿದಿರೆ, ಕುಂದಾಪುರ ಸೇರಿದಂತೆ 12 ವಿವಿಧ ಕಾಲೇಜಿನ ತಂಡಗಳು ಸೆಣಸಾಡಿದವು. ಅಂತರ್ ಕಾಲೇಜು ಮಂಗಳೂರು ವಿಭಾಗಮಟ್ಟದ ಮಹಿಳೆಯರ ತ್ರೋಬಾಲ್ ಪಂದ್ಯಾವಳಿಯಲ್ಲಿ ಮಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನ ಮಹಿಳಾ ತಂಡವು ಪ್ರಥಮ ಸ್ಥಾನ ಪಡೆದು, ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ಮಹಿಳಾ ತಂಡದವು ದ್ವೀತಿಯ ಸ್ಥಾನ ಪಡೆಯಿತು.
ಅತೀಥೆಯ ಉಜಿರೆಯ ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಹಿಳಾ ತಂಡವು ತೃತೀಯ ಸ್ಥಾನಕ್ಕೆ ಭಾಜನರಾದರು. ವಿಜೇತ ತಂಡಗಳಿಗೆ ಉಜಿರೆಯ ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಿದರು. ಉಪನ್ಯಾಸಕ ಡಾ. ರವೀಶ್ ಪ್ರಶಸ್ತಿ ವಿವರ ವಾಚಿಸಿದರು. ಉಪನ್ಯಾಸಕ ಡಾ. ನವೀನ್ ಸಹಕರಿಸಿದರು.