ಆತ್ಮಹತ್ಯೆಗೆ ಲೈಂಗಿಕ ಕಿರುಕುಳ ಕಾರಣ
ಉಪ್ಪಿನಂಗಡಿ: ತಿಂಗಳ ಹಿಂದೆ ಬಾಲಕಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಲೈಂಗಿಕ ಕಿರುಕುಳವೇ ಕಾರಣವೆಂಬುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಬೆಳ್ತಂಗಡಿ ಮೂಲದ ಬಾಲಕಿ ಆತ್ಮಹತ್ಯೆ ಮಾಡಿಕೊಂಡವಳು.
ಬಾಲಕಿ ಉಪ್ಪಿನಂಗಡಿಯ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ನ.4ರಂದು ತಲೆನೋವು ಎಂದು ಹೇಳಿ ಶಾಲೆಗೆ ಹೋಗದೆ ತನ್ನ ಮನೆಯಲ್ಲಿದ್ದಳು. ಈ ನಡುವೆ ಮನೆಯಲ್ಲಿ ತಂದಿಟ್ಟಿದ್ದ ಹುಲ್ಲಿಗೆ ಸಿಂಪಡಿಸುವ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಗೊಂಡಿದ್ದಳು. ಬಳಿಕ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನ.12ರಂದು ಮೃತಪಟ್ಟಿದ್ದಳು.
ಈ ಬಗ್ಗೆ ಕಡಬ ಪರಿಸರದ ರಾಜೇಶ್ ಎಂಬಾತ ಪೋನ್ ಮಾಡಿ ಕಿರುಕುಳ ನೀಡುತ್ತಿದ್ದ ಎಂದು ಮೃತರ ತಾಯಿ ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು, ಬಾಲಕಿಯ ಆತ್ಮಹತ್ಯೆಗೆ ಲೈಂಗಿಕ ಕಿರುಕುಳ ಕಾರಣ ಎಂಬುವುದನ್ನು ಪತ್ತೆ ಹಚ್ಚಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಪ್ರಧಾನ ಆರೋಪಿಯು ಅಪ್ರಾಪ್ತ ವಯಸ್ಕನಾಗಿದ್ದು, ಆತನೊಂದಿಗೆ ಕಿರುಕುಳಕ್ಕೆ ಸಹಕರಿಸಿದ ಪ್ರಶಾಂತ (21) ಎಂಬಾತನ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.