ಕಾಟಾಚಾರಕ್ಕೆ ಆಯೋಜಿಸಿದ ಸಂವಿಧಾನ ದಿನಾಚರಣೆ: ಎಸ್.ಸಿ. ಸಮುದಾಯ ಅಸಮಾಧಾನ
ಬಂಟ್ವಾಳ ತಹಶಿಲ್ದಾರ್ ಮಂಜುನಾಥ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದು, ವಿಷಯ ಪ್ರಸ್ತಾವಿಸಿದ ದಲಿತ ನಾಗರಿಕ ಹಿತರಕ್ಷಣಾ ಯುವ ವೇದಿಕೆ ಬಂಟ್ವಾಳ ಘಟಕದ ಅಧ್ಯಕ್ಷ ಸತೀಶ್ ಅರಳ ಅವರು ಸರಕಾರ ತಾಲೂಕುಮಟ್ಟದ ಈ ಕಾರ್ಯಕ್ರಮಕ್ಕೆ ಅನುದಾನ ನೀಡುತ್ತದೆ, ಆದರೆ ಸಮಾಜ ಕಲ್ಯಾಣಾಧಿಕಾರಿಗಳನ್ನು ಕೇಳಿದರೆ ಅನುದಾನ ಇಲ್ಲ ಎನ್ನುತ್ತಾರೆ. ಡಾ. ಬಿ.ಆರ್. ಅಂಬೇಡ್ಕರ್ ವಿಚಾರದಲ್ಲಿ ಇಂತಹ ಕಾಟಾಚಾರದ ಕಾರ್ಯಕ್ರಮವನ್ನು ನಾವು ಒಪ್ಪುವುದಿಲ್ಲ, ಮಾಡುವುದಿದ್ದರೆ ಅಚ್ಚುಕಟ್ಟಾಗಿ, ಗೌರವಯುತವಾಗಿ ನಡೆಸುವಂತೆ ಆಗ್ರಹಿಸಿದರು.
ಈ ಕುರಿತು ತಾಲೂಕು ಮಟ್ಟದ ಪೂರ್ವಭಾವಿ ಸಭೆ ಮಾಡಿದ್ದೆವು. ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ಳಲು ಸೂಚನೆ ನೀಡುವುದಾಗಿ ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.
ಒಳಗೆ ಗೋಳಿಸೊಪ್ಪು:
ಬಿ.ಸಿ.ರೋಡಿನಲ್ಲಿರುವ ಮೂರವರೆ ಕೋ.ರೂ.ವಿನ ಬಂಟ್ವಾಳ ತಾಲೂಕು ಅಂಬೇಡ್ಕರ್ ಭವನ ಎದುರಿನಿಂದ ನೋಡಲು ಚೆನ್ನಾಗಿದೆ, ಆದರೆ ಒಳಗೆ ಏನೂ ಸರಿ ಇಲ್ಲ, ಗೋಳಿಸೊಪ್ಪನಂತಿದೆ. ಕಳಪೆ ಕಾಮಗಾರಿಯಿಂದ ಶೌಚಾಲಯ ಉಪಯೋಗಿಸುವಂತಿಲ್ಲ, ಧ್ವನಿವರ್ಧಕ ಪ್ರತಿಧ್ವನಿಯಿಂದಾಗಿ ಕಾರ್ಯಕ್ರಮ ಮಾಡಲು ಸಾಧ್ಯವಾಗುತ್ತಿಲ್ಲ,ಸಂಬಂಧಪಟ್ಟ ಇಂಜಿನಿಯರ್ ಕರೆಯನ್ನೇ ಸ್ವೀಕರಿಸುತ್ತಿಲ್ಲ ಎಂದು ಭವನದ ನಿರ್ವಹಣಾ ಸಮಿತಿ ಸದಸ್ಯ ಸತೀಶ್ ಅರಳ ಸಭೆಯ ಗಮನಕ್ಕೆ ತಂದರು.
ಧ್ವನಿಗೂಡಿಸಿದ ನಾರಾಯಣ ಪುಂಚಮೆ, ಜನಾರ್ದನ ಬೋಳಂತೂರು, ಸೇಸಪ್ಪ ಬೆದ್ರಕಾಡು ನಮ್ಮ ಹೋರಾಟದ ಫಲವಾಗಿ ಈ ಭವನ ನಿರ್ಮಾಣವಾಗಿದೆ. ಕಾಮಗಾರಿಯ ಜವಾಬ್ದಾರಿ ಹೊತ್ತಿರುವ ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾನು ಕೂಡ ಈ ಭವನದಲ್ಲಿ ಸಭೆ ನಡೆಸಿದ್ದು, ತನಗೂ ಅನಭವಕ್ಕೆ ಬಂದಿದೆ. ಇಂಜಿನಿಯರ್ ಕರೆಸಿ ಸರಿಪಡಿಸಲು ಸೂಚಿಸುವುದಾಗಿ ತಹಶೀಲ್ದಾರ್ ಮಂಜುನಾಥ್ ಭರವಸೆಯಿತ್ತರು
ಎರಡೂವರೆ ಲಕ್ಷ ಬಾಕಿ:
ಈ ನಡುವೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಧ್ಯಪ್ರವೇಶಿಸಿ ಭವನದ ವಿದ್ಯುತ್ ಬಿಲ್ಲೇ ಎರಡೂವರೆ ಲಕ್ಷ ಬಾಕಿ ಇದೆ. ಹೊಂದಾಣಿಕೆ ಮಾಡಿಕೊಂಡು ಒಂದು ಲಕ್ಷ ರೂ.ಬಿಲ್ಲು ಪಾವತಿಸಲಾಗಿದೆ ಎಂದರು.
ಕಚೇರಿ ಶಿಫ್ಟ್ ಮಾಡಿ:
ಸಮಾಜ ಕಲ್ಯಾಣ ಇಲಾಖೆ ಬಾಡಿಗೆ ಕಚೇರಿಯಲ್ಲಿದೆ, ತಿಂಗಳಿಗೆ ಐವತ್ತೈದು ಸಾವಿರ ಬಾಡಿಗೆ ಪಾವತಿಸಲಾಗುತ್ತದೆ. ನಮ್ಮ ಸಮುದಾಯದ ಅಷ್ಟು ಮೊತ್ತದ ಹಣವನ್ನು ಬಾಡಿಗೆ ಕೊಡುವ ಬದಲು ಸಮಾಜ ಕಲ್ಯಾಣ ಇಲಾಖಾ ಕಚೇರಿಯನ್ನು ಅಂಬೇಡ್ಕರ್ ಭವನಕ್ಕೆ ಶಿಫ್ಟ್ ಮಾಡಬಹುದಲ್ಲವೇ ಎಂದು ವಿಶ್ವನಾಥ ಚಂಡ್ತಿಮಾರ್ ಮತ್ತು ಗಂಗಾಧರ್ ಪರಾರಿ ಸಲಹೆ ನೀಡಿದರು.
ಆಗ ಪ್ರತಿಕ್ರಿಯಿಸಿದ ತಹಶೀಲ್ದಾರ್ ಈ ಬಗ್ಗೆ ಮೊದಲೇ ಅವರಿಗೆ ನಿರ್ದೇಶನ ನೀಡಲಾಗಿತ್ತು ಇನ್ನೂ ಶಿಷ್ಟ್ ಅಗಿಲ್ಲವೆ ಎಂದು ಪ್ರಶ್ನಿಸಿದರು. ಮುಂದಿನ ಸಭೆಯೊಳಗೆ ಕಚೇರಿಯನ್ನು ಭವನವನ್ನು ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ಸೂಚನೆ ನೀಡುವಂತೆ ಜನಾರ್ದನ ಬೋಳಂತೂರು ಕೋರಿದರು.
ಸಭೆಗೆ ಗೈರು ಕಚೇರಿಯಲ್ಲೇ ಆರಾಮವಾಗಿ ಕುಳಿತ ಅಧಿಕಾರಿ:
ತಾಲೂಕು ಮಟ್ಟದ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದವರ ಕುಂದುಕೊರತೆ ಸಮಿತಿ ಸಭೆ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ನಡೆಯುವುದಾದರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಆದರೆ ಬಂಟ್ವಾಳ ತಾಲೂಕು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ವಿನಯ ಕುಮಾರಿ ಅವರು ಸಭೆಗೆ ಹಾಜರಾಗದೆ ಕಚೇರಿಯಲ್ಲಿಯೇ ಆರಾಮವಾಗಿ ಅಸೀನರಾಗಿರುವ ವಿಚಾರ ಪ.ಜಾ.ಪ.ಪಂ. ನಾಯಕ ಸಹಿತ ತಹಶೀಲ್ದಾರ್ ಮಂಜುನಾಥ್ ಅವರ ಅಸಮಾಧಾನಕ್ಕು ಕಾರಣವಾಯಿತು.
ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಸಭೆಗೆ ಗೈರು ಹಾಜರಾಗಿರುವುದನ್ನು ವಿಶ್ವನಾಥ ಚಂಡ್ತಿಮಾರ್, ಗಂಗಾಧರ್ ಪ್ರಶ್ನಿಸಿದರು. ನಿಗಮ ಅಧ್ಯಕ್ಷರು ಜಿಲ್ಲೆಯ ಪ್ರವಾಸದಲ್ಲಿದ್ದು, ಅವರ ಜೊತೆಗಿರುವುದರಿಂದ ಗೈರು ಆಗಿದ್ದಾರೆ ಎಂದು ಸಭೆಗೆ ಹಾಜರಾಗಿದ್ದ ಇಲಾಖೆಯ ಸಹಾಯಕ ಸಿಬ್ಬಂದಿ ಸಭೆಗೆ ಮಾಹಿತಿ ನೀಡಿದಾಗ, ಅವರು ಎಷ್ಟು ತಾಲೂಕಿಗೆ ಜವಾಬ್ದಾರರಾಗಿದ್ದಾರೆ ಎಂದು ತಹಶೀಲ್ದಾರ್ ಪ್ರಶ್ನಿಸಿದರು. ಅವರು ಒಂದೇ ತಾಲೂಕಿಗೆ ಅಧಿಕಾರಿಯಾದ ಮೇಲೆ, ಅದರಲ್ಲೂ ಅವರ ಇಲಾಖೆ ನಡೆಸುವ ಸಭೆಗೆ ಯಾಕೆ ಬಂದಿಲ್ಲ ಎಂದು ಮರು ಪ್ರಶ್ನಿಸಿದಾಗ ಅವರು ಕಚೇರಿಯಲ್ಲಿರುವುದಾಗಿ ಇಲಾಖಾ ಸಿಬ್ಬಂದಿ ಬಾಯಿಬಿಟ್ಟಿದ್ದಾರೆ.
ಈ ವಿಚಾರ ಬಹಿರಂಗವಾಗುತ್ತಿದ್ದಂತೆ ನಾವು ಗೈರಾದರೆ ನೋಟಿಸ್ ಜಾರಿಮಾಡಲಾಗಿತ್ತದೆ. ಕಚೇರಿಯಲ್ಲಿ ಕುಳಿತಿರುವ ಅವರಿಗೂ ನೋಟಿಸ್ ನೀಡಬೇಕು ಎಂದು ಅಧಿಕಾರಿವಲಯಗಳಿಂದ ಕೇಳಿಬಂತು. ಅವರಿಗೊಂದು ಕಾನೂನು, ಇತರರಿಗೆ ಬೇರೆ ಕಾನೂನು ಇದೆಯಾ? ಎಂದು ವಿಶ್ವನಾಥ ಚೆಂಡ್ತಿಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ಸಭೆಗೆ ಅವರು ಈ ಬಗ್ಗೆ ವಿವರಣೆ ನೀಡಬೇಕು ಎಂದು ಜನಾರ್ದನ ಬೋಳಂತೂರು ತಹಶೀಲ್ದಾರರನ್ನು ಒತ್ತಾಯಿಸಿದರು.
ವರ್ಷಕ್ಕೊಮ್ಮೆಯಾದರೂ ಸಮಾಜ ಕಲ್ಯಾಣ ಇಲಾಖೆಗ್ರಾಮ ಮಟ್ಟದಲ್ಲಿ ಸರಕಾರದ ಯೋಜನೆಗಳ ಮಾಹಿತಿಯನ್ನು ಪ್ರತ್ಯೇಕ ಕಾರ್ಯಕ್ರಮಗಳ ಮೂಲಕ ನೀಡಿದಲ್ಲಿ ಫಲಾನುಭವಿಗಳಿಗೆ ಪ್ರಯೋಜನವಾಗಬಹುದು ಎಂದು ಮಹಾಲಿಂಗ ನಾಯ್ಕ್ ಅವರು ಸಭೆಯ ಗಮನಸೆಳೆದರು.
ಗ್ರಾಮ ಸಭೆಗಳಿಗೆ ತಾಲೂಕಿನ ಅನುಷ್ಠಾನ ಅಧಿಕಾರಿಗಳನ್ನು ಬಾರದೆ ಅವರ ಕೈಕೆಳಗಿನ ಸಿಬ್ಬಂದಿಗಳು ಭಾಗವಹಿಸುತ್ತಾರೆ. ಇದರಿಂದ ಸಮುದಾಯದ ಜನರಿಗೆ ಸರಿಯಾದ ಮಾಹಿತಿಗಳು ಸಿಗುತ್ತಿಲ್ಲ ಎಂದು ಅವರು ಹೇಳಿದರು.
ಪುಣಚ ಗ್ರಾಮದ ತೋರಣಕಟ್ಟೆಯಿಂದ ಬಿ.ಸಿ.ರೋಡು ಹಾಗೂ ಮಂಗಳೂರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಓಡಿಸುವಂತೆ ಮಹಾಲಿಂಗ ನಾಯ್ಕ್ ಕೋರಿದರು. ಈ ಬಗ್ಗೆ ಅಧಿಕಾರಿಗಳು ರೂಟ್ ಪರಿಶೀಲನೆ ಮಾಡಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ತಹಶೀಲ್ದಾರ್ ಸೂಚಿಸಿದರು. ಗ್ರಾಮೀಣ ಭಾಗಕ್ಕೆ ಬಸ್ ಬಾರದೆ ಇದ್ದು, ಸರಕಾರದ ಗ್ಯಾರಂಟಿ ಯೋಜನೆಯ ಶಕ್ತಿ ಭಾಗ್ಯದಿಂದ ವಂಚಿತರಾಗಿದ್ದೆವೆ ಎಂದು ಬೇಸರ ವ್ಯಕ್ತಪಡಿಸಿದರು.
ಲೀಡ್ ಬ್ಯಾಂಕ್‌ನವರು ಸಭೆಗೆ ಹಾಜರಾಗದಿದ್ದು, ಸಮುದಾಯದ ಜನರ ಸಹಾಧನದ ಮಾಹಿತಿಗಳ ವಿವರವನ್ನು ಯಾರ ಬಳಿ ಕೇಳಬೇಕು? ಕಳೆದ ಬಾರಿಯ ಸಭೆಗೂ ಬ್ಯಾಂಕ್‌ನವರು ಗೈರಾಗಿದ್ದು ಮುಂದಿನ ಸಭೆಗೆ ಕಡ್ಡಾಯವಾಗಿ ಬರಲು ಸೂಚಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಈ ಸಭೆಗೂ ಗೈರು ಹಾಜರಾಗಿದ್ದಾರೆ ಎಂದು ಜನಾರ್ದನ ಬೋಳಂತೂರು ಸಭೆಗೆ ತಿಳಿಸಿದಾಗ ಅವರಿಗೆ ಶೋಕಾಸ್ ನೋಟಿಸ್ ಜಾರಿಗೆ ತಹಶೀಲ್ದಾರ್ ಮಂಜುನಾಥ್ ಅವರು ಸೂಚಿಸಿದರು.
ಪುಣಚ ಗ್ರಾಮದಲ್ಲಿ ರಸ್ತೆ ವಿಚಾರಕ್ಕೆ ಸಂಬಂಧಿಸಿ ಸಮುದಾಯದ ಎರಡು ಬಿಸಿಬಿಸಿ ಚರ್ಚೆ ನಡೆಯಿತು. ಆಗ ಮಧ್ಯಪ್ರವೇಶಿಸಿದ ತಹಶೀಲ್ದಾರ್ ವಯಕ್ತಿಕ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸದಂತೆ ತಾಕೀತು ಮಾಡಿದರು.
ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬಾಡಿಗೆಗೆಂದು ಬರುವ ಆಟೋರಿಕ್ಷಾ ಆಸ್ಪತ್ರೆಯ ಅವರಣದೊಳಗೆ ನಿಲ್ಲಿಸಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಜೊತೆಗೆ ತುರ್ತು ಚಿಕಿತ್ಸಾ ಘಟಕಕ್ಕೆ ಬರುವ ಮತ್ತು ತೆರಳುವ ಅಂಬ್ಯುಲೆನ್ಸ್ ಗೂ ಅಡಚಣೆಯಾಗುತ್ತಿದೆ. ಈ ಬಗ್ಗೆ ರಿಕ್ಷಾ ಚಾಲಕರಲ್ಲಿ ತಿಳಿಸಿದರೆ ಅವರು ವೈದ್ಯರೊಂದಿಗೆ ಜಗಳಕ್ಕೆ ನಿಲ್ಲುತ್ತಾರೆ. ಈ ಬಗ್ಗೆ ಪೊಲೀಸರಿಗೂ ಮನವಿ ಮಾಡಿದ್ದೇವೆ. ಆದರೆ ಅವರು ಒಂದೆರಡು ದಿನ ಬರುತ್ತಾರೆ ಮತ್ತೆ ಅವರ ಪತ್ತೆಯಿರುವುದಿಲ್ಲ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪುಷ್ಪಲತಾ ಮನವಿ ಮಾಡಿದರು. ಸಂಚಾರಿ ಪೊಲೀಸರಿಗೆ ತಕ್ಷಣ ಕ್ರಮಕ್ಕೆ ತಹಶೀಲ್ದಾರ್ ಸೂಚಿಸಿದರು.