ಒಬ್ಬರ ಜೀವ ಉಳಿಸುವ ಪುಣ್ಯವೇ ಬಂಧುತ್ವ-ಸಹೋದತ್ವ: ವಂ.ಫಾ. ಸೈಮನ್ ಡಿಸೋಜ

ಒಬ್ಬರ ಜೀವ ಉಳಿಸುವ ಪುಣ್ಯವೇ ಬಂಧುತ್ವ-ಸಹೋದತ್ವ: ವಂ.ಫಾ. ಸೈಮನ್ ಡಿಸೋಜ


ವಿಟ್ಲ: ಒಬ್ಬರ ಜೀವ ಉಳಿಸುವ ಪುಣ್ಯವೇ ಬಂಧುತ್ವ-ಸಹೋದತ್ವ ಎಂದು ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಂ.ಫಾ. ಸೈಮನ್ ಡಿಸೋಜ ಹೇಳಿದರು.

ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿಯ ಮುಚ್ಚಿರಪದವಿನಲ್ಲಿ ಫಾತಿಮಾ ಮಾತೆಯ ದೇವಾಲಯ ಇದರ ಸ್ತ್ರೀ ಸಂಘಟನೆಯ ನೇತೃತ್ವದಲ್ಲಿ ಹಾಗೂ ಐಸಿವೈಎಂ, ಹ್ಯುಮಾನಿಟಿ ಅಭಿಮಾನಿ ಬಳಗ ವಿಟ್ಲ, ಶ್ರೀ ವಿಷ್ಣುಮೂರ್ತಿ ಗೆಳೆಯರ ಬಳಗ ಮುರುವ-ಮಾಣಿಲ, ಶ್ರೀ ವಿಷ್ಣುಮೂರ್ತಿ ಮಹಿಳಾ ಸಂಘ ಮುರುವ-ಮಾಣಿಲ ಹಾಗೂ ಟಾಸ್ಕ್ ಬಳಗ ಪೆರುವಾಯಿ ಇದರ ಜಂಟಿ ಆಶ್ರಯದಲ್ಲಿ ಬಂಧುತ್ವ ಕ್ರಿಸ್ಮಸ್-2025 ಹಾಗೂ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಗುರು ವಂ.ಫಾ. ಸೈಮನ್ ಡಿಸೋಜ ಅವರು, ಕತ್ತಲೆಯಲ್ಲಿ, ಪಾಪ, ಮೌಢ್ಯ, ಅಹಂನಲ್ಲಿದ್ದ ಜನರಿಗೆ ರಕ್ಷಣೆ, ಬೆಳಕು ಹಾಗೂ ಬಿಡುಗಡೆ ನೀಡಲು ದೇವರು ತಮ್ಮ ಪುತ್ರನನ್ನೇ ಈ ಮನುಕುಲಕ್ಕೆ ನೀಡಿದರು. ದೇವರು ಎಲ್ಲವನ್ನೂ ನೀಡಿದಾಗ ನಾವೇನು ನೀಡಬಹುದು ಎಂದು ಯೋಚಿಸಿದಾಗ ಸರ್ವಧರ್ಮೀಯರೊಂದಿಗೆ ನಾವು ರಕ್ತದಾನ ಶಿಬಿರದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ರಕ್ತದಾನ ಎಂಬುವುದು ಮತ್ತೊಬ್ಬರೊಂದಿಗೆ ಹಂಚುವ ಸಂಭ್ರಮ. ಇತರರ ಜೀವನ ಉಳಿಸಲು ನಮ್ಮನ್ನೇ ನೀಡುವುದು ರಕ್ತದಾನದ ಮಹತ್ವ. ನಾವು ನೀಡುವ ರಕ್ತ ಯಾವ ಧರ್ಮದ ವ್ಯಕ್ತಿಗೆ ಹೋಗುತ್ತೆ ಗೊತ್ತಿಲ್ಲ. ಆದರೆ ಒಂದು ಜೀವ ಉಳಿಸುವ ಪುಣ್ಯದ ಕಾರ್ಯ ಆಗತ್ತೆ ಅಂದರೆ ಸಂತೋಷಪಡಬೇಕು. ಇದುವೇ ನಿಜವಾದ ಬಂಧುತ್ವ, ಇದೇ ನಿಜವಾದ ಭ್ರಾತೃತ್ವ, ಇದೇ ನಿಜವಾದ ಸಹೋದರತ್ವ ಎಂದರು.

ಮುಖ್ಯ ಅತಿಥಿಯಾಗಿ ಸಯ್ಯದ್ ಹಬೀಬುಲ್ಲಾ ಪೂಕೋಯ ತಂಙಲ್ ಪೆರುವಾಯಿ ಭಾಗವಹಿಸಿ ಮಾತನಾಡಿದರು.

ಇದೇ ವೇಳೆ ಸರ್ವಧರ್ಮೀಯರಿಗೆ ಚರ್ಚ್ ಹಾಗೂ ಸ್ತ್ರೀ ಸಂಘಟನೆ ವತಿಯಿಂದ ಕುಸ್ವಾರ್ ಹಂಚಲಾಯಿತು. 40ಕ್ಕೂ ಅಧಿಕ ಮಂದಿ ರಕ್ತದಾನದಲ್ಲಿ ಪಾಲ್ಗೊಂಡರು. ಜೊತೆಗೆ ಅಭಿನಯ ಹಾಗೂ ಕ್ಯಾರಲ್ಸ್ ಗಾಯನದ ಮೂಲಕ ಕ್ರಿಸ್ಮಸ್ ಸಂದೇಶದ ಸಾರಿದರು.

ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವೈಲೆಟ್ ಕುವೆಲ್ಲೊ, ಸ್ತ್ರೀ ಸಂಘಟನೆಯ ಘಟಕ ಅಧ್ಯಕ್ಷೆ ರೇಷ್ಮಾ ಡಿಸೋಜ, ಐಸಿವೈಎಂ ಘಟಕ ಅಧ್ಯಕ್ಷ ಸ್ಟ್ಯಾನಿ ಡಿಸೋಜ, ಟಾಸ್ಕ್ ಸಂಘಟನೆ ಗೌರವ ಅಧ್ಯಕ್ಷ ಹಮೀದ್ ಹಾಜಿ ದರ್ಖಾಸ್, ಶ್ರೀ ವಿಷ್ಣುಮೂರ್ತಿ ಗೆಳೆಯರ ಬಳಗ ಮುರುವ-ಮಾಣಿಲ ಇದರ ಸ್ಥಾಪಕ ರವಿಚಂದ್ರ ಕುಲಾಲ್, ಹ್ಯುಮಾನಿಟಿ ಅಭಿಮಾನಿ ಬಳಗದ ಮೌರಿಸ್ ಡಿಸೋಜ, ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಇದರ ಸಂಪರ್ಕಾಧಿಕಾರಿ ಡಾ.ಶೇಖ್ ಇಕ್ಬಾಲ್ ಹುಸೇನ್, ಸರ್ವ ಆಯೋಗಗಳ ಸಂಚಾಲಕ ರಾಲ್ಫ್ ಡಿಸೋಜ ಸೇರಿ ಹಲವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article