ಜ.25 ರಿಂದ 29 ರವರೆಗೆ ಕಾರ್ಕಳ ಅತ್ತೂರು ಬಸಿಲಿಕಾ ಉತ್ಸವ: ರೆ. ಪಾ. ಅಲ್ಬನ್ ಡಿಸೋಜಾ
ಮಹೋತ್ಸವದ ಪೂರ್ವಭಾವಿಯಾಗಿ ಜನವರಿ 16 ರಿಂದ 24ರವರೆಗೆ ಒಂಬತ್ತು ದಿನಗಳ ಕಾಲ ನವದಿನಗಳ ಪ್ರಾರ್ಥನೆ (ನೊವೆನಾ) ಆಯೋಜಿಸಲಾಗಿದೆ. ಈ ವರ್ಷದ ಮಹೋತ್ಸವದ ಧ್ಯೇಯವಾಕ್ಯವಾಗಿ ‘ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ’ ಎಂಬ ಸಂದೇಶವನ್ನು ಆಯ್ಕೆ ಮಾಡಲಾಗಿದೆ. ಈ ಧ್ಯೇಯವು ಮಾನವೀಯತೆ, ಪ್ರೀತಿ ಮತ್ತು ಸೇವಾಭಾವನೆಗೆ ಪ್ರೇರಣೆ ನೀಡುವ ಉದ್ದೇಶ ಹೊಂದಿದೆ ಎಂದರು.
ಮಹೋತ್ಸವದ ಪ್ರಮುಖ ದಿನಗಳಲ್ಲಿ ರಾಜ್ಯದ ಪ್ರಮುಖ 8 ಜನ ಧರ್ಮಾಧ್ಯಕ್ಷರು ಹಾಗೂ ಧರ್ಮಗುರುಗಳು ಬಲಿಪೂಜೆಗಳಲ್ಲಿ ಭಾಗವಹಿಸಲಿದ್ದಾರೆ. ಜನವರಿ 25ರಂದು ಉಡುಪಿ ಧರ್ಮಪ್ರಾಂತ್ಯದ ಜೆರಾಲ್ಡ್ ಐಸಾಕ್ ಲೋಬೊ ಧರ್ಮಾಧ್ಯಕ್ಷರು ಹಾಗೂ ಮಂಗಳೂರು ನಿವೃತ್ತ ಧರ್ಮಾಧ್ಯಕ್ಷ ಲುವಿಸ್ ಪಾವ್ ಡಿ’ಸೋಜಾ ಅವರ ಉಪಸ್ಥಿತಿಯಲ್ಲಿ ಬಲಿಪೂಜೆ ನಡೆಯಲಿದೆ.
ಜ.26 ರಂದು ಕಾರವಾರದ ದುಮಿಂಗ್ ಡಾಯಸ್ ಧರ್ಮಾಧ್ಯಕ್ಷರು, ಜ.27 ರಂದು ಅಲ್ಲಾಹಾಬಾದ್‌ನ ಲುವಿಸ್ ಮಸ್ಕರೇನಸ್ ಧರ್ಮಾಧ್ಯಕ್ಷರು, ಜ.28ರಂದು ಉಡುಪಿ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಅಜ್ಮೀರ್‌ನ ಜೋನ್ ಕರ್ವಾಲ್ಲೊ ಧರ್ಮಾಧ್ಯಕ್ಷರು, ಜ.29ರಂದು ಮಂಗಳೂರು ಧರ್ಮಾಧ್ಯಕ್ಷ ಪೀಟರ್ ಪಾವ್ ಸಲ್ದಾನ್ಹಾ ಅವರು ಬಲಿಪೂಜೆ ಕಾರ್ಯ ಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಮಹೋತ್ಸವದ ಅಂಗವಾಗಿ ಜ.29ರಂದು ಚರ್ಚ್ ಅವರಣದಲ್ಲಿ ಸತ್ಯದರ್ಶನ ಯಕ್ಷಗಾನ ಬಯಲಾಟವನ್ನು ಆಯೋಜಿಸಲಾಗಿದೆ. ಭಕ್ತರ ಸುರಕ್ಷತೆ ದೃಷ್ಟಿಯಿಂದ ಈ ಬಾರಿ ಚರ್ಚ್ ಆವರಣದಲ್ಲಿ ನಲವತ್ತಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಸೇವೆಯ ಭಾಗವಾಗಿ ಬಡವರಿಗಾಗಿ ಐದಕ್ಕಿಂತ ಹೆಚ್ಚು ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಈ ಬಾರಿ 2 ಮನೆ ಬಡವರಿಗೆ ಕಟ್ಟಿ ಕೊಡಲಾಗುತ್ತಿದ್ದು ಪ್ರತಿಯೊಂದು ಮನೆಗೆ ಸುಮಾರು 11 ಲಕ್ಷ ರೂ.ಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಹಾಯಕ ಧರ್ಮಗುರು ವ. ರೊಬಿನ್ ಸಾಂತುಮಾಯೆರ್, ಉಪಾಧ್ಯಕ್ಷ ಸಂತೋಷ್ ಡಿಸಿಲ್ವ, ಕಾರ್ಯದರ್ಶಿ ರೊನಾಲ್ಡ್ ನೊರೊನ್, ಸದಸ್ಯರಾದ ವಂದೀಶ್ ಮತಾಯಸ್, ವಲೇರಿಯನ್ ಪ್ಯಾಸ್, ಮೆಲ್ವಿನ್ ಕ್ಯಾಸ್ತಲಿನೊ, ಜಾನ್ಸನ್ ಡಿಸಿಲ್ವಾ ಮತ್ತಿತರರು ಉಪಸ್ಥಿತರಿದ್ದರು.