ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ವಿಶೇಷ ಮುತುವರ್ಜಿಯಡಿ ದ.ಕ. ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಸರ್ಕಾರದಿಂದ ಸ್ಮಾರ್ಟ್ ಬೋರ್ಡ್‌ಗಳ ಕೊಡುಗೆ

ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ವಿಶೇಷ ಮುತುವರ್ಜಿಯಡಿ ದ.ಕ. ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಸರ್ಕಾರದಿಂದ ಸ್ಮಾರ್ಟ್ ಬೋರ್ಡ್‌ಗಳ ಕೊಡುಗೆ


ಮಂಗಳೂರು: ದಕ್ಷಿಣ ಕನ್ನಡ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಅವರ ವಿಶೇಷ ಆಸಕ್ತಿ ಹಾಗೂ ಸತತ ಪ್ರಯತ್ನದ ಫಲವಾಗಿ, ಇಸ್ರೇಲ್ ಸರ್ಕಾರದ ‘ಮಾಶಾವ್’ (MASHAV) ಕಾರ್ಯಕ್ರಮದ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ ಶಾಲೆಗಳನ್ನು ಗುರುತಿಸಿ ಅವುಗಳಿಗೆ ಸ್ಮಾರ್ಟ್ ಬೋರ್ಡ್‌ಗಳನ್ನು ವಿತರಿಸಲಾಗುತ್ತದೆ. ಈ ಮೂಲಕ ಜಿಲ್ಲೆಯ ಶಿಕ್ಷಣ ಮತ್ತು ಕೃಷಿ ಕ್ಷೇತ್ರದಲ್ಲಿ ಇಸ್ರೇಲ್ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಂಸದರು ಮಹತ್ವದ ಹೆಜ್ಜೆ ಇರಿಸಿದ್ದಾರೆ.


ಅದರಂತೆ ಅನಂತಾಡಿಯ ದ.ಕ.ಜಿ.ಪಂ. ಶಾಲೆಯಲ್ಲಿ ಇಂದು ಜರುಗಿದ ವಿಶೇಷ ಕಾರ್ಯಕ್ರಮದಲ್ಲಿ ಇಸ್ರೇಲ್ ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್‌ಮನ್ ಸ್ಮಾರ್ಟ್ ಬೋರ್ಡ್‌ಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ. ಸಂಸದರಾಗಿ ಅಧಿಕಾರ ಸ್ವೀಕರಿಸಿದ ಆರಂಭಿಕ ದಿನಗಳಲ್ಲೇ ಕ್ಯಾ. ಬ್ರಿಜೇಶ್ ಚೌಟ ಅವರು ಇಸ್ರೇಲ್ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕ ಸಾಧಿಸಿದ್ದರು. ಕೃಷಿ ಹಾಗೂ ಶಿಕ್ಷಣದಲ್ಲಿ ವಿಶ್ವ ಮಟ್ಟದ ತಂತ್ರಜ್ಞಾನ ಹೊಂದಿರುವ ಇಸ್ರೇಲ್‌ನ ಸಹಕಾರವನ್ನು ಜಿಲ್ಲೆಗೆ ತರುವ ಅವರ ಪ್ರಯತ್ನದ ಮೊದಲ ಭಾಗವಾಗಿ ಈ ಯೋಜನೆ ಅನುಷ್ಠಾನಗೊಂಡಿದೆ.


ಸ್ಮಾರ್ಟ್ ಬೋರ್ಡ್ ಉದ್ಘಾಟನೆ ಬಳಿಕ ಬಳಿಕ ಮಾತನಾಡಿದ ಇಸ್ರೇಲ್ ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್‌ಮನ್, ‘ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಕೈಜೋಡಿಸುತ್ತಿರುವುದು ಸಂತಸದ ವಿಷಯ. ಈ ಸ್ಮಾರ್ಟ್ ಬೋರ್ಡ್‌ಗಳ ಮೂಲಕ ಡಿಜಿಟಲ್ ಶಿಕ್ಷಣಕ್ಕೆ ಹೊಸ ವೇಗ ಸಿಗಲಿದೆ. ವ್ಯಾಪಾರ ಹಾಗೂ ಸಾಂಸ್ಕೃತಿಕವಾಗಿಯೂ ಇಸ್ರೇಲ್ ಮತ್ತು ದಕ್ಷಿಣ ಕನ್ನಡದ ನಡುವಿನ ಸಂಬಂಧ ಮುಂದಿನ ದಿನಗಳಲ್ಲಿ ಇನ್ನಷ್ಟು ವೃದ್ಧಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಭಾರತ ಮತ್ತು ಇಸ್ರೇಲ್ ರಾಷ್ಟ್ರಗಳ ನಡುವೆ ಸುದೀರ್ಘವಾದ ಸ್ನೇಹ ಸಂಬಂಧವಿದೆ. ವಿಶೇಷವಾಗಿ ಕೃಷಿ ಮತ್ತು ರಕ್ಷಣಾ ಕ್ಷೇತ್ರದಲ್ಲಿ ನಾವು ಉತ್ತಮ ಸಹಯೋಗ ಹೊಂದಿದ್ದೇವೆ. ನಾನು ಸಂಸದನಾಗಿ ಅಧಿಕಾರ ವಹಿಸಿಕೊಂಡ ಆರಂಭದ ದಿನಗಳಲ್ಲೇ ನಮ್ಮ ಜಿಲ್ಲೆಯ ಅಭಿವೃದ್ಧಿಗಾಗಿ ಈ ಜಾಗತಿಕ ಸಹಯೋಗವನ್ನು ಸ್ಥಳೀಯ ಮಟ್ಟಕ್ಕೆ ತರಬೇಕು ಎಂಬ ಗುರಿ ಹೊಂದಿದ್ದೆ. 


ಕೃಷಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಇಸ್ರೇಲ್‌ನ ಅತ್ಯಾಧುನಿಕ ತಂತ್ರಜ್ಞಾನವನ್ನು ನಮ್ಮ ಜಿಲ್ಲೆಗೆ ಪರಿಚಯಿಸುವ ನಿಟ್ಟಿನಲ್ಲಿ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಅದರ ಮೊದಲ ಹೆಜ್ಜೆಯಾಗಿ ಇಂದು ಇಸ್ರೇಲ್ ಸರ್ಕಾರದ `MASHAV' ಕಾರ್ಯಕ್ರಮದ ಮೂಲಕ ಜಿಲ್ಲೆಯ ನಾಲ್ಕು ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ ಹಸ್ತಾಂತರಿಸಿದ್ದೇವೆ. ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆಯು ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಜಾಗತಿಕ ಮಟ್ಟಕ್ಕೆ ಏರಿಸಲಿದೆ ಎಂದು ಹೇಳಿದರು.

ಈ ಮಹತ್ವದ ಸಹಕಾರಕ್ಕಾಗಿ ಭಾರತದ ಇಸ್ರೇಲ್ ರಾಯಭಾರಿ ರೆವೆನ್ ಅಜರ್ ಮತ್ತು ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್‌ಮನ್ ಅವರಿಗೆ ಜಿಲ್ಲೆಯ ಸಮಸ್ತ ಜನರ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ವ್ಯಾಪಾರ-ವಹಿವಾಟು, ಕೃಷಿ ಕ್ಷೇತ್ರ ಸೇರಿದಂತೆ ಇಸ್ರೇಲ್ ಮಾದರಿಯ ನೂತನ ತಂತ್ರಜ್ಞಾನಗಳನ್ನು ಜಿಲ್ಲೆಗೆ ತರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದರು.

ಈ ಯೋಜನೆಯಡಿ ಒಟ್ಟು ನಾಲ್ಕು ಶಾಲೆಗಳಿಗೆ ತಲಾ 3.5 ಲಕ್ಷ ರೂ. ಅನುದಾನದಲ್ಲಿ ಸ್ಮಾರ್ಟ್ ಬೋರ್ಡ್ ನೀಡಲಾಗುತ್ತಿದೆ. ಅನಂತಾಡಿ ಬಂಟ್ರಿಂಜದ ದ.ಕ.ಜಿ.ಪಂ. ಪ್ರಾಥಮಿಕ ಶಾಲೆ, ವಿಟ್ಲದ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯ ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ಶಿಕ್ಷಣ ಸಂಸ್ಥೆಗಳು, ಮಣ್ಣಗುಡ್ಡೆಯ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್‌ಗಳನ್ನು ಒದಗಿಸಲಾಗಿದೆ.

ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್, ಅನಂತಾಡಿಯ ದ.ಕ.ಜಿ.ಪಂ. ಶಾಲೆ ಮುಖ್ಯೋಪಾಧ್ಯಾಯರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article