ಆನ್‌ಲೈನ್ ಬೆಟ್ಟಿಂಗ್: ಮೋಸ
ಕುಂದಾಪುರ: ಆನ್‌ಲೈನ್ ಬೆಟ್ಟಿಂಗ್ ಮೂಲಕ ಹೆಚ್ಚಿನ ಲಾಭದ ಆಸೆ ತೋರಿಸಿ 15 ಲಕ್ಷ ರೂ. ವಂಚನೆ ಮಾಡಲಾಗಿದೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರ ಸಂದೇಶ್ ಕುಲಾಲ್ ಬಿಲ್ಲಾಡಿ, ಬ್ರಹ್ಮಾವರ ನಿವಾಸಿ. ಇವರು ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಸುಮಾರು ಒಂದು ವರ್ಷದ ಹಿಂದೆ ಶಿರಿಯಾರ ನಿವಾಸಿ ಪ್ರದೀಪ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು.
ಪ್ರದೀಪ್ ‘ಪಾರ್ಕರ್’ ಎಂಬ ಅಪ್ಲಿಕೇಶನ್ ಮೂಲಕ ಆನ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದು, ಇದರಲ್ಲಿ ಹಣ ಹೂಡಿದರೆ ಹೆಚ್ಚಿನ ಲಾಭ ಸಾಧ್ಯವೆಂದು ಸಂದೇಶ್ ಕುಲಾಲ್ ಬಿಲ್ಲಾಡಿಯನ್ನು ಪ್ರಚೋದಿಸಿದ್ದಾನೆ ಎನ್ನಲಾಗಿದೆ.
ಪ್ರದೀಪ್ ಪರಿಚಯಮಾಡಿಕೊಟ್ಟ ಅವನ ತಂಡದವರಾದ ರೂಪೇಶ್, ಮನೋಜ್, ಧೀರಜ್ ಸೇರಿದಂತೆ ಇತರರು ವಾಟ್ಸಪ್ ಮೂಲಕ ಕಳುಹಿಸುತ್ತಿದ್ದ ಅಪ್ಲಿಕೇಶನ್ ಲಿಂಕ್, ಐಡಿ ಹಾಗೂ ಪಾಸ್‌ವರ್ಡ್ ಬಳಸಿ ಸಂದೇಶ್ ಕುಲಾಲ್ ಬೆಟ್ಟಿಂಗ್‌ನಲ್ಲಿ ಭಾಗವಹಿಸಿದ್ದರು.
ಬೆಟ್ಟಿಂಗ್‌ಗೆ ಸಂಬಂಧಿಸಿದ ಹಣವನ್ನು ಪ್ರದೀಪ್ ಸೂಚನೆಯಂತೆ ರೂಪೇಶ್, ಮನೋಜ್, ಧೀರಜ್, ಹರೀಶ, ವಿದೇಶ್ ಸೇರಿದಂತೆ ಇತರರ ಮೊಬೈಲ್ ಸಂಖ್ಯೆಗಳ ಮೂಲಕ ಫೋನ್‌ಪೇ ಹಾಗೂ ಗೂಗಲ್‌ಪೇ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಟ್ಟಿಂಗ್‌ನಲ್ಲಿ ದೂರುದಾರ ಸಂದೇಶ್ ಕುಲಾಲ್ ಸುಮಾರು 15 ಲಕ್ಷ ರೂ. ಹಣವನ್ನು ಗೆದ್ದಿದ್ದು, ಸದರಿ ಮೊತ್ತವನ್ನು ವಾಪಸ್ಸು ನೀಡದೆ ಆರೋಪಿತರು ಮೋಸ ಮಾಡಿದ್ದಾರೆ ಎನ್ನಲಾಗಿದೆ. ಸುಮಾರು ಒಂದು ತಿಂಗಳ ಹಿಂದೆ ಶಿರಿಯಾರದಲ್ಲಿ ಪ್ರದೀಪ್ ಅವರನ್ನು ಭೇಟಿ ಮಾಡಿ, ಗೆದ್ದ ಹಣವನ್ನು ನೀಡುವಂತೆ ಕೇಳಿದಾಗ, ಪ್ರದೀಪ್ ಹಾಗೂ ಅವನ ತಂಡ ಹಣ ನೀಡಲು ನಿರಾಕರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಇದೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.