ಫೆ.1 ಮತ್ತು 2 ರಂದು ‘ಮಹಿಳಾ ವೈಭವ 2026’: ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ
ಮಂಗಳೂರು: ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಪುರಭವನದಲ್ಲಿ ಫೆ.1 ಮತ್ತು 2ರಂದು ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ -‘ಮಹಿಳಾ ವೈಭವ 2026’ನ್ನು ಆಯೋಜಿಸಲಾಗಿದೆ.
ಮಹಿಳಾ ಸಶಕ್ತೀಕರಣದ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಫೆ.1 ರಂದು ಬೆಳಗ್ಗೆ 8.30ಕ್ಕೆ ಬಲ್ಮಠದ ಯುಬಿಎಂಸಿ ಮೈದಾನದಿಂದ ನೆಹರೂ ಮೈದಾನದ ವರೆಗೆ ಮಹಿಳಾ ಜಾಥ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೋಮಯ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಜ್ಯದ 31 ಜಿಲ್ಲೆಗಳ ಮಹಿಳೆಯರು ಜಾಥಾದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮದ ಕಳೆ ಹೆಚ್ಚಿಸಲಿದ್ದಾರೆ. ಬಳಿಕ ನೆಹರೂ ಮೈದಾನದಲ್ಲಿ ಮಹಿಳೆಯರ ಜಾನಪದ ಕ್ರೀಡೋತ್ಸವಕ್ಕೆ ಚಾಲನೆ ಸಿಗಲಿದೆ. ಮಧ್ಯಾಹ್ನ ಬಳಿಕ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಾಂಸ್ಕೃತಿಕ ಸಮ್ಮೇಳದ ಅಂಗವಾಗಿ ಸಾಂಸ್ಕೃತಿಕ ಸ್ಪರ್ಧೆಗಳು, ವಿಚಾರಗೋಷ್ಠಿ, ಮಹಿಳಾ ಉತ್ಪನ್ನಗಳ ಪ್ರದರ್ಶನ, ಆಹಾರ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿವೆ ಎಂದರು.
ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಸೇರಿದಂತೆ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ. ವಿವಿಧ ವಿಚಾರಗೋಷ್ಠಿಗಳು ನಡೆಯಲಿದ್ದು, ಸಮ್ಮೇಳನದಲ್ಲಿ ನಿರ್ಣಯ ಕೈಗೊಂಡು ಸರಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಲು ನಿರ್ಧರಿಸಲಾಗಿದೆ ಎಂದವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಐವರು ಮಹಿಳಾ ಸಾಧಕಿಯರಿಗೆ ಕರ್ನಾಟಕ ರಾಜ್ಯ ಮಹಿಳಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ತಲಾ 1 ಲಕ್ಷ ರೂ. ನಗದು, ಫಲಕ ಇತ್ಯಾದಿಗಳನ್ನು ಒಳಗೊಂಡಿದೆ. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೂ 1 ಲಕ್ಷ ರೂ.. 75 ಸಾವಿರ ಮತ್ತು 50 ಸಾವಿರ ರೂ. ಬಹುಮಾನವಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಈಗಾಗಲೇ ಮಹಿಳಾ ಮಂಡಲಗಳ ಸದಸ್ಯೆಯರು ನೋಂದಾಯಿಸಿಕೊಂಡಿದ್ದು, ವಸತಿ, ಊಟೋಪಚಾರದ ವ್ಯವಸ್ಥೆಗಳನ್ನೂ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ, ಉಪಾಧ್ಯಕ್ಷೆ ಮನೋರಮಾ ಉಮೇಶನ್, ಪ್ರಧಾನ ಕಾರ್ಯದರ್ಶಿ ಸುಖಲಾಕ್ಷಿ ಸುವರ್ಣ, ಕಾರ್ಯದರ್ಶಿ ರೇಖಾ ಶೆಟ್ಟಿ, ಜತೆ ಕಾರ್ಯದರ್ಶಿ ಅನುರಾಧ, ಖಜಾಂಚಿ ಭಾರತಿ ಉಪಸ್ಥಿತರಿದ್ದರು.