ಜ.31 ಮತ್ತು ಫೆ.1 ರಂದು ಆಯುಷ್ ಹಬ್ಬ
ಮಂಗಳೂರು: ಆಯುಷ್ ಹಬ್ಬ ಸಮಿತಿ ವತಿಯಿಂದ ಜ.31 ಮತ್ತು ಫೆ.1ರಂದು ಡಾ.ಟಿ.ಎಂ.ಎ.ಪೈ ಸಭಾಂಗಣದಲ್ಲಿ ಆಯುಷ್ ಹಬ್ಬ ಆಯೋಜಿಸಲಾಗಿದೆ ಎಂದು ಆಯಷ್ ಹಬ್ಬ ಸಂಘಟನಾ ಕಾರ್ಯದರ್ಶಿ ಡಾ.ಸಚಿನ್ ನಡ್ಕ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುಷ್ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕರ ಹೃದಯ ಆರೋಗ್ಯ, ಹಿರಿಯ ನಾಗರಿಕರ ವಯೋಸಹಜ ಸಮಸ್ಯೆಗಳ ಪರಿಹಾರ ಕ್ರಮ, ಸೂಕ್ತ ಆಹಾರ, ಜೀವನ ಶೈಲಿಯಂತಹ ಸ್ವಾಸ್ಥ್ಯ ಸಂರಕ್ಷಣೆಗಾಗಿ ವಿವಿಧ ಉಪಯುಕ್ತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅತ್ಯುತ್ತಮ ಕಾರ್ಯಕ್ರಮ ಇದಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಆಯುಷ್ ಮೂಲಕ ಹೃದಯದ ಆರೋಗ್ಯ ರಕ್ಷಣೆಗಾಗಿ ‘ ಹೃದಯ ಆರೋಗ್ಯ ಸಂಭ್ರಮ’ದಡಿ ನೋಂದಣಿ ಮಾಡಿದ 2 ಸಾವಿರ ಮಂದಿಗೆ ಉಚಿತ ಹೃದಯ ತಪಾಸಣೆ ಮಾಡಿ ಸಲಹೆ ಸೂಚನೆ ನೀಡಲಾಗುವುದು ಎಂದವರು ತಿಳಿಸಿದರು.
ಹಿರಿಯ ನಾಗರಿಕರಿಗಾಗಿ ‘ಸಂತೃಪ್ತ ಜೀವನ ಸಂಧ್ಯಾ‘ ಮೂಲಕ ವಯೋ ಸಹಜ ಆರೋಗ್ಯ ಸಮಸ್ಯೆಗಳಿಗೆ ಆಯುಷ್ ಚಿಕಿತ್ಸಾ ಪರಿಹಾರ, ಸಲಹೆ ನೀಡಲಾಗುತ್ತದೆ. ಖಾದ್ಯ ಪ್ರಿಯರಿಗಾಗಿ ಆರೋಗ್ಯಕರ ಆಹಾರ ಹಬ್ಬ ಮತ್ತು ನ್ಯಾಚುರೋಪತಿ ಫುಡ್ ಫೆಸ್ಟ್ ಹಮ್ಮಿಕೊಳ್ಳಲಾಗಿದೆ. ಪ್ರಕೃತಿ ದತ್ತ ಉತ್ಪನ್ನಗಳು ಆರೋಗ್ಯ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುವ ದೃಷ್ಟಿಯಿಂದ ಸಾವಯವ ಸಂತೆ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಯೋಜನ ಸಮಿತಿಯ ಪ್ರಮುಖರಾದ ಡಾ.ಗುರುರಾಜ್, ಡಾ.ರಾಘವೇಂದ್ರ ಉಡುಪ, ಡಾ.ಕೃಷ್ಣ ಗೋಖಲೆ, ಡಾ.ಗೋಪಾಲಕೃಷ್ಣ ನಾಯಕ್, ಡಾ.ಸುಭೋದ್ ಭಂಡಾರಿ, ಡಾ.ಗೀತಾಶ್ರೀ ಉಪಸ್ಥಿತರಿದ್ದರು.