15 ನಗರಗಳಿಗೆ ವ್ಯಾಪಿಸಿದ ‘ಹ್ಯಾಪಿನೆಸ್ ಫಾರ್ ಹರ್’ ಅಭಿಯಾನ: 1 ಲಕ್ಷ ಮಹಿಳೆಯರ ಸಬಲೀಕರಣದ ಗುರಿ
ಜನವರಿ ತಿಂಗಳನ್ನು ಜಾಗತಿಕವಾಗಿ ‘ಗರ್ಭಕಂಠ ಕ್ಯಾನ್ಸರ್ ಜಾಗೃತಿ ತಿಂಗಳು’ ಎಂದು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಸ್ಥೆಯು ವಂಚಿತ ವರ್ಗದ ಮಹಿಳೆಯರಿಗೆ ದೀರ್ಘಕಾಲಿಕ ಸ್ವಚ್ಛತಾ ಉತ್ಪನ್ನಗಳನ್ನು ವಿತರಿಸುತ್ತಿದೆ. ತನ್ನ ವಿವಿಧ ಮಾಲ್‌ಗಳಲ್ಲಿ ಸ್ಯಾನಿಟರಿ ಪ್ಯಾಡ್ ವಿತರಣಾ ಯಂತ್ರಗಳನ್ನು ಸ್ಥಾಪಿಸಿರುವ ಸಂಸ್ಥೆಯು, ಇದುವರೆಗೆ 500ಕ್ಕೂ ಹೆಚ್ಚು ಜಾಗೃತಿ ಕಾರ್ಯಾಗಾರಗಳನ್ನು ನಡೆಸಿ, ಸುಮಾರು 20 ಲಕ್ಷಕ್ಕೂ ಹೆಚ್ಚು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ವಿತರಿಸಿದೆ. 2030ರ ವೇಳೆಗೆ ಒಟ್ಟು 3 ಲಕ್ಷ ಮಹಿಳೆಯರನ್ನು ತಲುಪುವ ಗುರಿಯನ್ನು ಸಂಸ್ಥೆ ಹೊಂದಿದೆ.
ಮಂಗಳೂರು ಮತ್ತು ನವಿ ಮುಂಬೈನ ಶಾಲೆಗಳಲ್ಲಿ ಈಗಾಗಲೇ ಯಶಸ್ವಿ ಕಾರ್ಯಾಗಾರಗಳು ನಡೆದಿದ್ದು, 1000ಕ್ಕೂ ಹೆಚ್ಚು ಬಾಲಕಿಯರಿಗೆ ಜಾಗೃತಿ ಮೂಡಿಸಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು, ದೆಹಲಿ, ಹೈದರಾಬಾದ್, ಗುರಗಾಂವ್ ಮತ್ತು ಚಂಡೀಗಢ ಸೇರಿದಂತೆ ಹಲವು ನಗರಗಳ ಸರ್ಕಾರಿ ಶಾಲೆಗಳ ಸಾವಿರಾರು ವಿದ್ಯಾರ್ಥಿನಿಯರಿಗೆ ಈ ಅಭಿಯಾನ ವಿಸ್ತರಣೆಯಾಗಲಿದೆ.
ಈ ಕುರಿತು ಮಾತನಾಡಿದ ನೆಕ್ಸಸ್ ಸೆಲೆಕ್ಟ್ ಟ್ರಸ್ಟ್‌ನ ಸಿಇಒ ದಲೀಪ್ ಸೆಹಗಲ್, “ವಿಶ್ವದ ಶೇ. 20%ರಷ್ಟು ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಭಾರತದಲ್ಲೇ ವರದಿಯಾಗುತ್ತಿವೆ. ಆದರೂ ಮುಟ್ಟಿನ ಆರೋಗ್ಯದ ಕುರಿತು ಜಾಗೃತಿಯ ಕೊರತೆಯಿದೆ. ‘ಹ್ಯಾಪಿನೆಸ್ ಫಾರ್ ಹರ್’ ಮೂಲಕ ನಾವು ಅತ್ಯಂತ ಅಗತ್ಯವಿರುವ ಸಮುದಾಯಗಳಿಗೆ ವಿಜ್ಞಾನಾಧಾರಿತ ಮಾಹಿತಿ ಮತ್ತು ಸುರಕ್ಷಿತ ವೇದಿಕೆಯನ್ನು ಒದಗಿಸುತ್ತಿದ್ದೇವೆ,” ಎಂದರು.
ಈ ಕಾರ್ಯಾಗಾರಗಳಲ್ಲಿ ತರಬೇತಿ ಪಡೆದ ಶಿಕ್ಷಕರು ಮಹಿಳೆಯರಿಗೆ ತಮ್ಮ ದೇಹದ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಗರ್ಭಕಂಠದ ಕ್ಯಾನ್ಸರ್ ಮತ್ತು ಪಿಸಿಒಎಸ್ (PCOS) ಕುರಿತು ಸೂಕ್ತ ವೈದ್ಯಕೀಯ ಸಲಹೆ ಪಡೆಯಲು ಮಾರ್ಗದರ್ಶನ ನೀಡುತ್ತಿದ್ದಾರೆ.