ಜ.17-18 ರಂದು ಸ್ವರ್ಣ ಸಂಭ್ರಮ ಕಾರ್ಯಕ್ರಮ
ಮಂಗಳೂರು: ಶಕ್ತಿನಗರ ಪದವು ಫ್ರೆಂಡ್ಸ್ ಕ್ಲಬ್ ಸ್ವರ್ಣ ಸಂಭ್ರಮದಲ್ಲಿದ್ದು, ಜ.17 ಹಾಗೂ ಜ.18 ರಂದು ಸ್ವರ್ಣ ಸಂಭ್ರಮ ಕಾರ್ಯಕ್ರಮವನ್ನು ಶಕ್ತಿನಗರದ ಸರಕಾರಿ ಫ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಾಲ್ ಕುಮಾರ್ ಕೆ. ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ ಸಹಿತ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಶಕ್ತಿನಗರ ಪದವು ಫ್ರೆಂಡ್ಸ್ ಕ್ಲಬ್ ತನ್ನ ಕಾರ್ಯಗಳ ಮೂಲಕ ಗುರುತಿಸಿಕೊಂಡಿದೆ. ಸ್ವರ್ಣ ಸಂಭ್ರಮ ಕಾರ್ಯಕ್ರಮವನ್ನು ವಿಶೇಷ ನೆಲೆಯಲ್ಲಿ ಆಚರಿಸುವ ಆಶಯದಿಂದ ಪಿಎಫ್ ಸಿ ಪರ್ಬ ಎಂಬ ಆಹಾರ ಮೇಳ ಪ್ರದರ್ಶನ ಹಾಗೂ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸಂಸ್ಥೆಯ ಸ್ವರ್ಣ ಸಂಭ್ರಮ ವಾರ್ಷಿಕೋತ್ಸವ ಕಾರ್ಯಕ್ರಮಗಳು ಫೆ.13ರಿಂದ 17ರವರೆಗೆ ವಿವಿಧ ಮನರಂಜನಾ ಕಾರ್ಯಕ್ರಮದೊಂದಿಗೆ ನಡೆಯಲಿದೆ. ಪೂರ್ವಭಾವಿಯಾಗಿ ನಡೆಯುವ ಆಹಾರ ಮೇಳವನ್ನು ಜ.17ರಂದು ಶಾಸಕ ವೇದವ್ಯಾಸ ಕಾಮತ್ ಅವರು ಉದ್ಘಾಟಿಸಲಿದ್ದಾರೆ. ಜ.18ರಂದು ಸಂಜೆ 7 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಾಧಕ ಶ್ರೇಷ್ಠರನ್ನು ಗೌರವಿಸಲಾಗುವುದು ಎಂದರು.
ಆಹಾರ ಮೇಳದಲ್ಲಿ ಸುಮಾರು 30ಕ್ಕೂ ಮೇಲ್ಪಟ್ಟು ವಿವಿಧ ಖಾದ್ಯಗಳ ಮಳಿಗೆಗಳು ಹಾಗೂ ಸುಮಾರು 10ಕ್ಕೂ ಮಿಕ್ಕಿದ ವಿವಿಧ ಪ್ರದರ್ಶನ, ಆಟದ ಮಳಿಗೆಗಳು ಇರಲಿವೆ. ಮನರಂಜನೆಯ ಅಂಗವಾಗಿ ಎರಡೂ ದಿನ ಸಂಜೆ 4ರಿಂದ ರಾತ್ರಿ 10ರವರೆಗೆ ಸಾರ್ವಜನಿಕರಿಗೆ ಕರೋಕೆ ಸಂಗೀತ, ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು, ನೃತ್ಯ ಪ್ರದರ್ಶನ ಸಹಿತ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪದವು ಫ್ರೆಂಡ್ಸ್ ಕ್ಲಬ್ ಹಾಗೂ ಸ್ವರ್ಣ ಸಂಭ್ರಮ ಸಮಿತಿ ಪದಾಧಿಕಾರಿಗಳಾದ ರವೀಂದ್ರ ರೈ, ಹರೀಶ್ ಕುಮಾರ್, ರವೀಂದ್ರ, ದಿನೇಶ್ ಟಿ., ರಾಮಕೃಷ್ಣ ಭಟ್, ರವಿಚಂದ್ರ ಉಪಸ್ಥಿತರಿದ್ದರು.