‘ಆಯುಷ್ ಹಬ್ಬ-2026’ಕ್ಕೆ ಚಾಲನೆ
ಆರೋಗ್ಯಕರ ಆಹಾರ, ಮಹಿಳಾ ಸ್ವಾಸ್ಥ್ಯ, ಆಯುಷ್ ಸೌಂದರ್ಯ, ಹೃದಯ ಆರೋಗ್ಯ, ನಾಡಿ ತರಂಗಿಣಿ, ಒತ್ತಡ ನಿರ್ವಹಣಾ ಕೌಶಲ್ಯ, ಸಂತೃಪ್ತ ಜೀವನ ಸಂಧ್ಯಾ, ಸ್ವದೇಶಿ ಸಾವಯವ ಹಬ್ಬ, ಸ್ವಾಸ್ಥ್ಯ ಪ್ರದರ್ಶನ ಮತ್ತು ಔಷಧ ಮಳಿಗೆಗಳು, ವೈದ್ಯಕೀಯ ಅಧೀವೇಶನದ ಹಾಕಥಾನ್, ಸಾಂಸ್ಕೃತಿಕ ವೈಭವ, ಮನರಂಜನೆ, ಮಕ್ಕಳ ಹಬ್ಬ, ಔಷಧಿ ಸಸ್ಯ ಪ್ರದರ್ಶನ, ಆಯುಷ್ ಚಿಕಿತ್ಸಾ ದರ್ಶನ ಮೊದಲಾದ ಎಲ್ಲ ವಿಭಾಗಗಳಿದ್ದು, ಆಯುಷ್ ಹಬ್ಬ ಜನರನ್ನು ಆಕರ್ಷಿಸುತ್ತಿದೆ.
ಹಬ್ಬದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ನಮ್ಮ ಪಾರಂಪರಿಕ ವೈದ್ಯಕೀಯ ಅಭ್ಯಾಸಗಳನ್ನು ಮತ್ತೊಮ್ಮೆ ಆಧುನಿಕ ಜಗತ್ತಿಗೆ ತೋರಿಸಿ, ಈ ಕುರಿತು ತಿಳುವಳಿಕೆ ನೀಡುವುದನ್ನು ಆಯುಷ್ ಹಬ್ಬದ ಮೂಲಕ ಮಾಡುತ್ತಿದ್ದೇವೆ. ಪ್ರಸ್ತುತ ಕಾಲಘಟ್ಟದಲ್ಲಿ ಅಲೋಪತಿ ವೈದ್ಯಪದ್ಧತಿಯ ಅವಶ್ಯಕತೆ ಇದ್ದೇ ಇದೆ. ಅದರ ಜತೆಗೆ ಆಯುರ್ವೇದ, ಹೋಮಿಯೋಪತಿ, ಯುನಾನಿ ಇತ್ಯಾದಿ ಪ್ರಾಚೀನ ವೈದ್ಯ ಪದ್ಧತಿಗಳನ್ನು ಅನೇಕ ರೋಗಗಳಿಗೆ ಬಳಕೆ ಮಾಡಲಾಗುತ್ತಿದೆ. ಆಯುಷ್ ವೈದ್ಯ ಪದ್ಧತಿಯು ರೋಗ ನಿಯಂತ್ರಣಕ್ಕೂ ಪರಿಣಾಮಕಾರಿಯಾಗಿದೆ. ಸಾರ್ವಜನಿಕರು ಆಯುಷ್ ಹಬ್ಬದ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಹಬ್ಬವನ್ನು ಉದ್ಘಾಟಿಸಿದ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಮಠಾಧೀಶ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಭಾರತೀಯ ಪ್ರಾಚೀನ ವೈದ್ಯ ಪದ್ಧತಿಗಳು ದೈಹಿಕ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಕೂಡ ನೀಡುತ್ತವೆ. ಇದು ಋಷಿ ಮುನಿಗಳು ಜಗತ್ತಿನ ಆರೋಗ್ಯ, ಕಲ್ಯಾಣಕ್ಕಾಗಿ ತೋರಿಸಿದ ಉತ್ತಮ ದಾರಿ ಎಂದು ಹೇಳಿದರು.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್ ಸಲ್ದಾನ್ಹ ಮಾತನಾಡಿ, ಆಯುರ್ವೇದ, ಯುನಾನಿ ಇತ್ಯಾದಿ ಪಾರಂಪರಿಕ ಸಮಗ್ರ ವೈದ್ಯ ಪದ್ಧತಿ ಜಾಗತಿಕವಾಗಿ ವ್ಯಾಪಕವಾಗಿ ಬಳಕೆಯಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಶೇ ೪೦- ೯೦ರಷ್ಟು ಮಂದಿ ಬೇರೆ ರೀತಿಯ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಮಾನಸಿಕ, ದೈಹಿಕ ಆರೋಗ್ಯ, ನೆಮ್ಮದಿಗೆ ಆಯುಷ್ ಕಾರಣವಾಗಿದೆ ಎಂದು ಹೇಳಿದರು.
ಎಸ್‌ವೈಎಸ್ ದ.ಕ ಜಿಲ್ಲಾಧ್ಯಕ್ಷ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿ, ಭಾರತ ಪ್ರಕೃತಿಯೊಂದಿಗೆ ಬದುಕಲು ಕಲಿಸುವ ಮಣ್ಣು. ಪ್ರಕೃತಿಯೊಂದಿಗೆ ಸೇರಿ ಬದುಕುವುದನ್ನು ನಮ್ಮ ಪಾರಂಪರಿಕ ಚಿಕಿತ್ಸಾ ಪದ್ಧತಿ ಕಲಿಸಿಕೊಟ್ಟಿದೆ. ಮತ್ತೆ ಪರಂಪರೆಯ ಆಹಾರ ಪದ್ಧತಿ, ವೈದ್ಯಕೀಯ ಪದ್ಧತಿಯ ಕಡೆಗೆ ಹೆಚ್ಚು ಗಮನ ಹರಿಸಬೇಕಾಗಿದೆ ಎಂದರು.
ಮಾಹೆ ವಿವಿ ಪ್ರೊ ಚಾನ್ಸಲರ್ ಪ್ರೊ. ಎಚ್.ಎಸ್. ಬಳ್ಳಾಲ್ ಮಾತನಾಡಿ, ಇಂದು ಆಯುರ್ವೇದದ ಮೇಲಿನ ನಂಬಿಕೆ ಹೆಚ್ಚುತ್ತಿದೆ. ಹಲವು ಕಾಯಿಲೆಗಳಿಗೆ ಆಯುರ್ವೇದದಲ್ಲಿ ಪರಿಹಾರವಿದೆ. ಈ ಹಿನ್ನೆಲೆಯಲ್ಲಿ ಮಾಹೆ ಆಯುರ್ವೇದಕ್ಕೂ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಆಯುರ್ವೇದ ಸಹಿತ ಪಾರಂಪರಿಕ ವೈದ್ಯ ಪದ್ಧತಿಯನ್ನು ಬೆಳೆಸುವುದಕ್ಕಾಗಿ ಕೇಂದ್ರ ಸರ್ಕಾರ ಪ್ರತ್ಯೇಕ ಆಯುಷ್ ಸಚಿವಾಲಯ ರಚನೆ ಮಾಡಿದೆ ಎಂದು ಹೇಳಿದರು.
ಆಯುಷ್ ಹಬ್ಬ ಸಮಿತಿ-2026ರ ಅಧ್ಯಕ್ಷ ಡಾ. ಕೇಶವ ಪಿ.ಕೆ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್, ಬೆಂಗಳೂರು ಎಸ್.ವ್ಯಾಸ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಆರ್. ನಾಗೇಂದ್ರ, ಶಾರದಾ ಸಮುಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಎಸ್‌ಡಿಎಂ ಆಯುರ್ವೇದ ಮೆಡಿಕಲ್ ಕಾಲೇಜುಗಳ ನಿರ್ದೇಶಕ ಡಾ. ಪ್ರಸನ್ನ ನರಸಿಂಹ ರಾವ್, ಡಾ. ಖಾಲಿದ್, ಕೋಟೆಕಲ್ ವೈದ್ಯಕೀಯ ಸಂಸ್ಥೆಯ ಡಾ. ಮಧು ವಾರಿಯರ್, ಆಯುರ್ವೇದ ಯುನಾನಿ ವೈದ್ಯ ಮಂಡಳಿ ಮಾಜಿ ಅಧ್ಯಕ್ಷ ಡಾ. ಸತ್ಯಮೂರ್ತಿ ಭಟ್, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಕಣಚೂರು ಮೋನು, ಸಂಘಟನಾ ಕಾರ್ಯದರ್ಶಿ ಡಾ. ಸಚಿನ್ ನಡ್ಕ ಇದ್ದರು. ಆಯುಷ್ ಹಬ್ಬ ಸಮಿತಿಯ ಗೌರವಾಧ್ಯಕ್ಷೆ ಡಾ. ಆಶಾ ಜ್ಯೋತಿ ರೈ ಸ್ವಾಗತಿಸಿದರು.