ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಯಂತ್ರಣ ಕೇಂದ್ರ ಸಚಿವರಿಗೆ ಕ್ರಮಕ್ಕೆ ಪತ್ರ: ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ಸೋಶಿಯಲ್ ಮೀಡಿಯಾ ಬಳಕೆಯಿಂದ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಶಾಲಾ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆಯನ್ನು ಈಗಾಗಲೇ ನಿಷೇಧಿಸಲಾಗಿದೆ. ನಮ್ಮ ದೇಶದಲ್ಲೂ ಯುವ ಪೀಳಿಗೆ ಮಾನಸಿಕ ಸಮಸ್ಯೆಗೆ ಹೆಚ್ಚಾಗಿ ತುತ್ತಾಗುತ್ತಿರುವುದರಿಂದ ಇದನ್ನು ತಡೆಯುವ ಅಗತ್ಯವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿಯಾದ ಡಿಜಿಟಲ್ ಅಡಿಕ್ಷನ್‌ನಿಂದಾಗಿ ಯುವ ಪೀಳಿಗೆಯಲ್ಲಿ ಮಾನಸಿಕ ಖಿನ್ನತೆ, ಒತ್ತಡ, ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಶಾಲಾ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಯಂತ್ರಿಸುವ ಕುರಿತು ರಾಷ್ಟ್ರ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಸ್ಮಾರ್ಟ್ ಫೋನ್‌ಗಳನ್ನು ಹೆತ್ತವರೇ ಮಕ್ಕಳ ಕೈಗೆ ಕೊಡುತ್ತಿದ್ದಾರೆ. ಕೊರೊನಾ ನಂತರ ಈ ಪ್ರವೃತ್ತಿ ಹೆಚ್ಚು ಉಲ್ಭಣಗೊಂಡಿದೆ. ಸೋಶಿಯಲ್ ಮೀಡಿಯಾ ನಿಯಂತ್ರಣ ಒಂದು ರಾಜ್ಯದಲ್ಲಿ ಮಾಡಿದರೆ ಸಾಲದು. ರಾಷ್ಟ್ರ ಮಟ್ಟದಲ್ಲಿ ಈ ಕುರಿತು ಚರ್ಚೆಯಾಗಿ ಸರಿಯಾದ ತೀರ್ಮಾನಕ್ಕೆ ಬರಬೇಕಿದೆ. ಅನುಷ್ಠಾನ ಮಾಡಲು ಸಾಧ್ಯವಾಗುವಂಥ, ಎಲ್ಲರೂ ಒಪ್ಪುವಂಥ ಕ್ರಮ ಆಗಬೇಕು. ಈ ಕುರಿತು ಹೆಚ್ಚಿನ ಚರ್ಚೆಯ ಅಗತ್ಯವಿದೆ ಎಂದು ಹೇಳಿದರು.
ಕ್ನಾಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್ ಆತ್ಮಹತ್ಯೆಯ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಅವರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಏನಾಗಿದೆ ಗೊತ್ತಿಲ್ಲ. ಈ ಬಗ್ಗೆ ಹೆಚ್ಚೇನೂ ಹೇಳಲ್ಲ. ಐಟಿಯವರು ತಮ್ಮ ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಆದರೆ ಆ ಸಂಸ್ಥೆಯನ್ನು ಅನೇಕ ಪ್ರಕರಣಗಳಲ್ಲಿ ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಆದರೆ ಈ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ಆಗಿದೆಯೋ ಇಲ್ಲವೋ ಹೇಳಲಾಗದು. ಐಟಿಯವರು ಅನೇಕ ಜನರ ಮೇಲೆ ದಾಳಿ ನಡೆಸುತ್ತಾರೆ. ಅವರೇ ಇದಕ್ಕೆ ಕಾರಣ ಅಂತಾನೂ ಹೇಳಲಾಗದು. ಈ ವಿಚಾರದ ಕುರಿತು ಸ್ಪಷ್ಟ ಮಾಹಿತಿ ಹೊರಬಂದ ಬಳಿಕ ಗೊತ್ತಾಗಲಿದೆ ಎಂದರು.