ಜ.26 ರಂದು ಮುಕುಂದ್ ರಿಯಾಲ್ಟಿ ‘ಡೆನ್ ಡೆನ್ 2026’
ಮಂಗಳೂರು: ಮಂಗಳೂರು ಸರ್ಫ್ ಕ್ಲಬ್ ವತಿಯಿಂದ ಮೂರನೇ ಆವೃತ್ತಿಯ ಮುಕುಂದ್ ರಿಯಾಲ್ಟಿ ‘ಡೆನ್ ಡೆನ್ 2026’ ಅಂತಾರಾಷ್ಟ್ರೀಯ ಮುಕ್ತ ಸಮುದ್ರ ಈಜು ಚಾಂಪಿಯನ್‌ಶಿಪ್ ಜ.26ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಪದ್ಮನಾಭ ನಾಯಕ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಜು ಸ್ಪರ್ಧೆಗೆ ಬೆಳಗ್ಗೆ 6.30 ಕೋಸ್ಟ್ ಗಾರ್ಡ್ ಡಿಐಜಿ ಪಿ.ಕೆ.ಮಿಶ್ರಾ ಅವರು ಚಾಲನೆ ನೀಡಲಿದ್ದಾರೆ ಎಂದರು.
ಈ ವರ್ಷ ಸುಮಾರು 400 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸ್ಪರ್ಧೆಯಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 500 ಮೀ, 2 ಕಿ.ಮೀ., 4 ಕಿ.ಮೀ., 6 ಕಿ.ಮೀ. ಮತ್ತು 8 ಕಿ.ಮೀ. ವಿಭಾಗಗಳಲ್ಲಿ ಈಜು ಸ್ಪರ್ಧೆ ನಡೆಯಲಿದೆ. ತರಬೇತಿ ಪಡೆದ ಜೀವರಕ್ಷಕರು ರಕ್ಷಣೆಗೆ ಸಹಕಾರ ನೀಡಲಿದ್ದಾರೆ. ಒಲಿಂಪಿಯನ್ ಗಗನ್ ಉಲ್ಲಾಲ್‌ಮಠ್ ಅವರ ನೇತೃತ್ವದ ತಾಂತ್ರಿಕ ಸಮಿತಿ ಸಹಕರಿಸಲಿದ್ದಾರೆ ಎಂದವರು ಮಾಹಿತಿ ನೀಡಿದರು.
ಮುಕುಂದ್ ರಿಯಾಲ್ಟಿಯ ವ್ಯವಸ್ಥಾಪಕ ಪಾಲುದಾರ ಗುರುದತ್ತ ಶೆಣೈ ಅವರು ಮಾತನಾಡಿ, ಡೆನ್‌ಡೆನ್ 2026 ಈಜು ಸ್ಪರ್ಧೆಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಮುಕುಂದ್ ರಿಯಾಲ್ಟಿ ವಹಿಸಿದೆ. ಕ್ರೀಡಾ ಸಂಸ್ಕೃತಿಯನ್ನು ಗಟ್ಟಿಗೊಳಿಸುವ, ಸಕ್ರೀಯ ಜೀವನ ಶೈಲಿಗೆ ಪ್ರೋತ್ಸಾಹ ಮತ್ತು ಮಂಗಳೂರು ನಗರವನ್ನು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಪ್ರತಿಬಿಂಬಿಸುವುದು ಉದ್ದೇಶ ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಉಪಾಧ್ಯಕ್ಷ ಕ್ಯಾ. ದೀಪಕ್ ಕರಿಯಪ್ಪ, ಕಾರ್ಯದರ್ಶಿ ಕಾರ್ತಿಕ್ ನಾರಾಯಣ್, ಈಜು ಸ್ಪರ್ಧೆಯ ಉಸ್ತುವಾರಿ ಶ್ರೀಕೃಷ್ಣ ವಸಂತ್ ಉಪಸ್ಥಿತರಿದ್ದರು.