ಜ.26 ರಿಂದ 29: ಕಾರ್ಮಿಕ ಸಂಹಿತೆಗಳ ವಿರುದ್ಧ ಜಿಲ್ಲೆಯಾದ್ಯಂತ 4 ಕಡೆಗಳಿಂದ ಪಾದಯಾತ್ರೆ
ಮಂಗಳೂರು: 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವುದರ ವಿರುದ್ಧ, ಕಾರ್ಪೊರೇಟ್ ಪರ ರೂಪಿಸಿರುವ ಸಂಹಿತೆಗಳ ವಿರುದ್ಧ, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಯನ್ನು ವಿರೋಧಿಸಿ ಫೆ.12 ರಂದು ರೈತ ಕಾರ್ಮಿಕರ ನೇತೃತ್ವದಲ್ಲಿ ನಡೆಯಲಿರುವ ಅಖಿಲ ಭಾರತ ಮಹಾಮುಷ್ಕರದ ಪ್ರಚಾರಾರ್ಥವಾಗಿ ಜನವರಿ 26ರಿಂದ 29ರವರೆಗೆ 4 ದಿನಗಳ ಕಾಲ ದ.ಕ. ಜಿಲ್ಲೆಯಾದ್ಯಂತ 4 ಕಡೆಗಳಿಂದ ಪಾದಯಾತ್ರೆ ನಡೆಯಲಿದೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಯಾದ CITU ದ.ಕ. ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಜನವರಿ 26ರಂದು ಬೆಳ್ತಂಗಡಿಯಿಂದ ಹೊರಡಲಿರುವ ಪಾದಯಾತ್ರೆಯನ್ನು ಜಿಲ್ಲೆಯ ಹಿರಿಯ ರೈತ ಕಾರ್ಮಿಕ ನಾಯಕ ಕೆ. ಯಾದವ ಶೆಟ್ಟಿಯವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು CITU ದ.ಕ. ಜಿಲ್ಲಾಧ್ಯಕ್ಷ ಬಿ.ಎಂ. ಭಟ್ ಅವರು ವಹಿಸಲಿದ್ದಾರೆ. ಜಾಥಾ ತಂಡದ ನೇತೃತ್ವವನ್ನು CITU ಜಿಲ್ಲಾ ನಾಯಕರಾದ ಈಶ್ವರಿ ಪದ್ಮುಂಜ, ಜಯಶ್ರೀ, ದೇವಕಿ, ಲೋಲಾಕ್ಷಿ ಬಂಟ್ವಾಳ, ಶ್ಯಾಮರಾಜ ಪಟ್ರಮೆ, ಉದಯ ಬಂಟ್ವಾಳ,ಧನಂಜಯ ಗೌಡರವರು ವಹಿಸಲಿದ್ದಾರೆ.
ಜನವರಿ 27ರಂದು ಮೂಡಬಿದ್ರೆಯಿಂದ ಹೊರಡಲಿರುವ ಪಾದಯಾತ್ರೆಯನ್ನು CITU ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿಯವರು ಉದ್ಘಾಟಿಸಲಿದ್ದಾರೆ. ಜಾಥಾ ತಂಡದ ನೇತೃತ್ವವನ್ನು CITU ಜಿಲ್ಲಾ ನಾಯಕರಾದ ರಾಧಾ ಮೂಡಬಿದ್ರೆ ಹಾಗೂ ನೋಣಯ್ಯ ಗೌಡರವರು ವಹಿಸಲಿದ್ದಾರೆ.
ಜನವರಿ 28ರಂದು ಮುಲ್ಕಿಯಿಂದ ಹೊರಡುವ ಪಾದಯಾತ್ರೆಯನ್ನು CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು ಉದ್ಘಾಟಿಸಿದರೆ, ತಲಪಾಡಿಯಿಂದ ಹೊರಡುವ ಪಾದಯಾತ್ರೆಯನ್ನು CITU ಜಿಲ್ಲಾ ಉಪಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿಯವರು ಉದ್ಘಾಟಿಸಲಿದ್ದಾರೆ. ಮುಲ್ಕಿ ಪಾದಯಾತ್ರೆಯ ನೇತೃತ್ವವನ್ನು CITU ಜಿಲ್ಲಾ ನಾಯಕ ಬಿ.ಕೆ. ಇಮ್ತಿಯಾಜ್, ರವಿಚಂದ್ರ ಕೊಂಚಾಡಿ, ಜಯಲಕ್ಷ್ಮಿ ಜಪ್ಪಿನಮೊಗರು, ಪ್ರಮೀಳಾ ಶಕ್ತಿನಗರ, ತಯ್ಯುಬ್ ಬೆಂಗರೆ, ಶ್ರೀನಾಥ್ ಕಾಟಿಪಳ್ಳ, ಸಾಧಿಕ್ ಮುಲ್ಕಿಯವರು ವಹಿಸಿದರೆ, ತಲಪಾಡಿ ಪಾದಯಾತ್ರೆಯ ನೇತೃತ್ವವನ್ನು CITU ಜಿಲ್ಲಾ ನಾಯಕರಾದ ರೋಹಿದಾಸ್ ಭಟ್ನಗರ, ಪ್ರಮೋದಿನಿ ಕಲ್ಲಾಪು, ರಜಾಕ್ ಮುಡಿಪು, ರಮೇಶ್ ಉಳ್ಳಾಲರವರು ವಹಿಸಿದ್ದಾರೆ.
ಜನವರಿ 29ರಂದು ಬೆಳಗ್ಗೆ 10 ಗಂಟೆಗೆ 4 ಪಾದಯಾತ್ರೆಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ಸಮಾಪನಗೊಳ್ಳಲಿದ್ದು, ಬಳಿಕ ಕಾರ್ಮಿಕರ ಬೃಹತ್ ಮೆರವಣಿಗೆ ಸಾಗಿ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಬಹಿರಂಗ ಸಭೆ ನಡೆಯಲಿದೆ. ಸಮಾರೋಪ ಭಾಷಣವನ್ನು CITU ಕರ್ನಾಟಕ ರಾಜ್ಯಾಧ್ಯಕ್ಷೆ ಮೀನಾಕ್ಷಿ ಸುಂದರಂ ಅವರು ನಡೆಸಲಿದ್ದಾರೆ.
ಕಾರ್ಮಿಕ ಸಂಹಿತೆಗಳಿಂದ ದುಡಿಯುವ ವರ್ಗದ ಮೇಲಾಗಿರುವ ಅಪಾಯಗಳನ್ನು ಜನತೆಗೆ ವಿವರಿಸಲು ಜಿಲ್ಲೆಯಾದ್ಯಂತ ಆಯೋಜಿಸಲಾದ 4 ಪಾದಯಾತ್ರೆಗಳನ್ನು ಯಶಸ್ವಿಗೊಳಿಸಲು ಜಿಲ್ಲೆಯ ಜನತೆ ಸಂಪೂರ್ಣ ಸಹಕಾರ ನೀಡಬೇಕೆಂದು CITU ದ.ಕ. ಜಿಲ್ಲಾ ಸಮಿತಿಯು ಕರೆ ನೀಡಿದೆ.