ಜ.28 ರಂದು ಬೆಂಗಳೂರಲ್ಲಿ ಫ್ರೀಡಂ ಪಾರ್ಕ್ ಮುಷ್ಕರ: ಡಾ. ವಸಂತ ಕುಮಾರ್ ಶೆಟ್ಟಿ
ಮಂಗಳೂರು: ರಾಜ್ಯದ ವಿಶೇಷ ಶಾಲಾ ಶಿಕ್ಷಕ ಶಿಕ್ಷಕೇತರ ಸಿಬಂದಿಯ ವೇತನ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘ ಹಾಗೂ ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ಜ.28ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಾರ್ವತ್ರಿಕ ಮುಷ್ಕರ ಆಯೋಜಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಾ. ವಸಂತ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 34 ವಿಶೇಷ ಶಾಲೆಗಳಿಗೆ ಮಾತ್ರ 1982ರ ಅನುದಾನ ನೀತಿಯಂತೆ ಅನುದಾನ ದೊರೆಯುತ್ತಿದೆ. ರಾಜ್ಯ ಸಂಘದ
ಹೋರಾಟದ ಫಲವಾತಿ 2010-11ರಿಂದ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನೂತನ ಅನುದಾನ ನೀತಿಯನ್ನು ಜಾರಿಗೆ ತಂದಿತು. ಅದು ಶಿಶು ಕೇಂದ್ರೀಕೃತ ಸಹಾಯಧನ ಯೋಜನೆ. ಇದು ಗೌರವ ಧನ ಮಾತ್ರ. 2010-11ರಲ್ಲಿ 6500 ರೂ. ಗೌರವಧನ ಇದ್ದುದು, 201415ರಲ್ಲಿ 13,500 ಬಳಿಕ 2022ರಲ್ಲಿ 20,250ಕ್ಕೆ ಏರಿಕೆಯಾಯಿತು. ಪ್ರಸ್ತುತ 166 ಶಾಲೆಗಳು ಈ ಸಹಾಯಧನ ಪಡೆಯುತ್ತಿದೆ. ಆದರೆ 1982ರ ಅನುದಾನ ನೀತಿಯನ್ವಯ ಅನುದಾನ ಪಡೆಯುತ್ತಿರುವ ಶಾಲೆಯ ಶಿಕ್ಷಕರು ಸುಮಾರು 60,000-80,000ರ ವರೆಗೆ ವೇತನ ಪಡೆಯುತ್ತಿದ್ದಾರೆ. ಈ ತಾರತಮ್ಯ ಯಾಕೆ ಎಂದು ಪ್ರಶ್ನಿಸಿದರು.
ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವ ಸಾಂವಿಧಾನಿಕ ಆಶಯದಂತೆ ಶಿಶು ಕೇಂದ್ರಿತ ಅನುದಾನ ಪಡೆಯುತ್ತಿರುವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬಂದಿಗೆ 1982ರ ಅನುದಾನ ನೀತಿಯಂತೆ
ಸಿಬಂದಿಗೆ ದೊರಕುವ ಎಲ್ಲ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ವಿಧಾನ ಸಭಾಧ್ಯಕ್ಷರ ನೇತೃತ್ವದಲ್ಲಿ ಈಗಾಗಲೇ ನಡೆದಿರುವ ಎರಡು ಪ್ರಮುಖ ಸಭೆಯ ಆದೇಶದಂತೆ ಇಲಾಖಾ ನಿರ್ದೇಶಕರು ರಾಜ್ಯದ ವಿಶೇಷ ಶಾಲೆಗಳ ಅನುದಾನವನ್ನು ಶೇ.40ಕ್ಕೆ ಏರಿಕೆ ಮಾಡಿ ಸರಕಾರಕ್ಕೆ ನೀಡಿರುವ ಪ್ರಸ್ತಾವನೆಯನ್ನು ಕೂಡಲೇ ಮಂಜೂರು ಮಾಡಬೇಕು. ಸುಪ್ರೀಂಕೋರ್ಟ್ ನೀಡಿರುವ ಆದೇಶದ ಪ್ರಕಾರ ರಾಜ್ಯದ ಎಲ್ಲ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರಿಗೆ ಪೂರ್ಣ ಪ್ರಮಾಣದ ಆರ್ಥಿಕ ಸೌಲಭ್ಯ ಒದಗಿಸಬೇಕು. ವಿಶೇಷ ಶಾಲೆಗಳಿಗೆ ಇಲಾಖೆ ನೀಡುವ ಅನುದಾನವನ್ನು ಪ್ರತಿ ವರ್ಷ 2 ಕಂತುಗಳಲ್ಲಿ ಬಿಡುಗಡೆ ಮಾಡಬೇಕು. ‘ನನ್ನ ಬಳಿಕ ಯಾರು‘ ಎಂಬ ವಿಶೇಷ ಮಕ್ಕಳ ಹೆತ್ತವರ ಪ್ರಶ್ನೆಗೆ ಉತ್ತರವೆಂಬಂತೆ 25 ವರ್ಷ ವಯೋಮಿತಿ ಮೀರಿದ ಮಾನಸಿಕ ಭಿನ್ನ ಸಾಮರ್ಥ್ಯದ ಯುವಕಯುವತಿಯರಿಗಾಗಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ವೃತ್ತಿಪರ ಹಾಗೂ ಪೂರ್ವ ವೃತ್ತಿಪರ ಸಂಸ್ಥೆಗಳನ್ನು ಪ್ರಾರಂಭಿಸಲು ಇಲಾಖೆ ಅನುಮತಿ ನೀಡುವುದರೊಂದಿಗೆ ಅನುದಾನ ಮಂಜೂರು ಮಾಡಬೇಕು ಎಂದು ಈ ಮೊದಲಾದ ಬೇಡಿಕೆಗಳನ್ನು ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿರಾಜ್ಯದ ವಿಶೇಷ ಶಾಲೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕರು ಶಿಕ್ಷಕೇತರ ಸಿಬಂದಿ, 25 ವರ್ಷ ಮೀರಿದ ಬುದ್ದಿಮಾಂದ್ಯ ಯುವಕ ಯುವತಿಯರು ಹಾಗೂ ಅವರ ಹೆತ್ತರ ಎಂದರು.
ಸಾನಿಧ್ಯ ವಿಶೇಷ ಶಾಲೆ ಅಧ್ಯಕ್ಷ ಮಹಾಬಲ ಮಾರ್ಲ, ಚೇತನ ವಿಶೇಷ ಶಾಲೆ ಮುಖ್ಯಸ್ಥ ವಿನೋದ್ ಶೆಣೈ ಉಪಸ್ಥಿತರಿದ್ದರು.