ಮಹಿಳಾ ಸ್ವಾಸ್ಥ್ಯ ಸಂಭ್ರಮ: ಜ.31 ರಿಂದ ಆಯುಷ್ ಹಬ್ಬ
ಮಂಗಳೂರು: ಆಯುಷ್ ಹಬ್ಬ ಸಮಿತಿ-2026 ವತಿಯಿಂದ ವಿವಿಧ ಆಯುಷ್ ಕಾಲೇಜುಗಳು, ಸಂಘಟನೆಗಳು ಮತ್ತು ವೃತ್ತಿನಿರತ ವೈದ್ಯರ ಸಹಭಾಗಿತ್ವದಲ್ಲಿ ನಗರದ ಡಾ. ಟಿ.ಎಂ.ಎ. ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಜ.31 ಮತ್ತು ಫೆ.1 ರಂದು ಆಯುಷ್ ಹಬ್ಬ ನಡೆಯಲಿದ್ದು, ಈ ವೇಳೆ ಮಹಿಳಾ ಸ್ವಾಸ್ಥ್ಯ ಸಂಭ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯುಷ್ ಹಬ್ಬ ಸಮಿತಿ ಗೌರವಾಧ್ಯಕ್ಷೆ ಡಾ. ಆಶಾ ಜ್ಯೋತಿ ರೈ ತಿಳಿಸಿದರು.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ಜೀವನ ಜೀವನ ಶೈಲಿಯಲ್ಲಿ ಕಂಡುಬರುವ ರೋಗಗಳಿಗೆ ಕಾರಣವಾಗುವ ಅಂಶಗಳನ್ನು ಗುರುತಿಸಿ ಅವುಗಳ ನಿಯಂತ್ರಣ ಸಾಧಿಸಲು ಸೂಕ್ತ ಸಲಹೆ ಮತ್ತು ಆಯುಷ್ ಚಿಕಿತ್ಸಾ ಕ್ರಮಗಳು ಏನೇನಿವೆ? ಎಲ್ಲಿ ಲಭ್ಯವಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಆಯುಷ್ ಹಬ್ಬದಲ್ಲಿ ಪಡೆಯಬಹುದು. ಆಯುಷ್ ಹಬ್ಬ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ ಮತ್ತು ಹೋಮಿಯೋಪತಿ ವೈದ್ಯಕೀಯ ಸೇವೆಗಳ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದರು.
ಮಹಿಳಾ ಸ್ವಾಸ್ಥ್ಯ ಹಬ್ಬ..
ಹ್ಯಾಪಿ ಪೀರಿಯಡ್ಸ್ -ಮಕ್ಕಳಿಂದ ಹಿರಿಯರ ತನಕ ಮಾಸಿಕ ಋ?ತುಸ್ರಾವದ ಬಗ್ಗೆ ಸಮಸ್ಯೆ ಇರುವವರಿಗೆ ತಜ್ಞ ಮಹಿಳಾ ಆಯುಷ್ ವೈದ್ಯರು ಸೂಕ್ತ ಸಲಹೆಗಳನ್ನು ನೀಡಲಿರುವರು. ಹೆರಿಗೆಯ ಮೊದಲು, ಹೆರಿಗೆಯ ನಂತರ ತಾಯಿಯ ಆರೋಗ್ಯಕ್ಕೆ ಆಯಷ್ ಆರೈಕೆ, ಗರ್ಭಿಣಿಯ ಒಂಭತ್ತು ತಿಂಗಳುಗಳ ಆಹಾರ, ವಿಹಾರ,ಆಚಾರ ವಿಚಾರಗಳ ಕುರಿತು ಮಾಹಿತಿ. ಆರೋಗ್ಯವಂತ ಶಿಶುವಿಗಾಗಿ ಸಲಹೆಗಳು, ಸೌಂದರ್ಯ, ವೆಲ್ನೆಸ್ ಉತ್ಸವ, ಮಹಿಳಾ ಆಯುಷ್ ತಜ್ಞ ವೈದ್ಯರಿಂದ ತಪಾಸಣೆ, ಚಿಕಿತ್ಸಾ ಸಲಹೆ. ನಾಡಿ ಪರೀಕ್ಷೆಯ ಆಧುನಿಕ ಯಂತ್ರದ ಮೂಲಕ ಪರೀಕ್ಷೆ ಮತ್ತು ಆರೋಗ್ಯ ಸಲಹೆ ಪಡೆಯುವ ಅವಕಾಶ, ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳಾದ ಬಿಳಿಸೆರಗು, ಅಧಿಕ ರಕ್ತಸ್ರಾವ ಇತ್ಯಾದಿ ವ್ಯಾಧಿಗಳಿಗೆ ಆಯುಷ್ ವೈದ್ಯರಿಂದ ಚಿಕಿತ್ಸಾ ಸಲಹೆ ಇರಲಿದೆ ಎಂದರು.
ವಿಶೇಷ ಜಾಗೃತಿ ಶಿಬಿರ..
ಉಡುಪಿಯ ಎಸ್‌ಡಿಎಂ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ಆಯುರ್ವೇದ ತ್ವಚೆ ಮತ್ತು ಉಗುರಿನ ಆರೈಕೆಯ ಬಗ್ಗೆ ಜಾಗೃತಿ ಶಿಬಿರವನ್ನು ಆಯೋಜಿಸಿದೆ. ತ್ವಚೆ ಮತ್ತು ಉಗುರಿನ ಸಮಸ್ಯೆಗಳಾದ ಮೊಡವೆ, ಶುಷ್ಕತೆ, ವರ್ಣಹಾನಿ ಅಥವಾ ಹಠಾತ್ ಬದಲಾವಣೆಗಳಿಗೆ ಆಯುರ್ವೇದ ತಜ್ಞರಿಂದ ಉತ್ತರಗಳನ್ನು ಮತ್ತು ವೈಯಕ್ತಿಕ ಮಾರ್ಗದರ್ಶನವನ್ನು ಪಡೆಯಬಹುದು ಎಂದರು.
ಮಕ್ಕಳಿಗಾಗಿ ಮಕ್ಕಳ ಹಬ್ಬ..
ಮಕ್ಕಳ ದೈಹಿಕ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆರೋಗ್ಯಾಧಾರಿತ ಕಾರ್ಯಕ್ರಮ ಫಾದರ್ ಮುಲ್ಲರ್ ಹೋಮಿಯೋಪತಿ ಮೆಡಿಕಕಲ್ ಕಾಲೇಜು ವತಿಯಿಂದ ಮಕ್ಕಳಿಗಾಗಿ ವಿಶೇಷ, ವೈವಿಧ್ಯಮಯ, ವಿನೋದಾವಳಿ, ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿದೆ. ಜ.31 ರಂದು ಎರಡು ವರ್ಷದೊಳಗಿನ ಮಕ್ಕಳಿಗೆ ಆರೋಗ್ಯವಂತ ಮಗು, 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಛದ್ಮ ವೇಷ ಸ್ಪರ್ಧೆ, 15 ವರ್ಷದೊಳಗಿನ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಫೆ.1ರಂದು ಆರೋಗ್ಯವಂತ ಮಗು, ಪ್ರತಿಭಾ ಪ್ರದರ್ಶನ, ವಿನೋದ, ಜ್ಞಾಪಕ ಶಕ್ತಿಯ ಆಟಗಳು, 10ರಿಂದ 15 ವರ್ಷದೊಳಗಿನ ಮಕ್ಕಳಿಗಾಗಿ ಬೆಂಕಿ ಇಲ್ಲದ ಅಡುಗೆ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಬಹುಮಾನವಿದೆ. ಉಚಿತವಾಗಿ ಮಕ್ಕಳ ವೈದ್ಯಕೀಯ ತಪಾಸಣೆ, ಸಲಹೆ ಲಭ್ಯವಿದೆ ಎಂದರು.
ಕೂದಲು ಮತ್ತು ಹೋಮಿಯೋಪತಿ..
ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ‘ಕೂದಲು ಮತ್ತು ಹೋಮಿಯೋಪಥಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ವೈದ್ಯರಿಂದ ಉಚಿತ ತಪಾಸಣೆ ಮತ್ತು ಸಲಹೆ ವೈದ್ಯಕೀಯ ಸಲಹೆಯ ನಂತರ ವೈಯಕ್ತಿಕ ತಲೆಚರ್ಮ ಮತ್ತು ಕೂದಲು ವಿಶ್ಲೇಷಣೆ, ಎಲ್ಲ ರೀತಿಯ ಕೂದಲಿಗೆ ಹೊಂದುವಂತೆ ಕೂಡಲು ಆರೋಗ್ಯ, ಕೂದಲು ಆರೈಕೆ
ಮತ್ತು ನಿರ್ವಹಣೆ ಕುರಿತು ಮಾರ್ಗದರ್ಶನ, ಅತಿ ದೀರ್ಘ ಕೂದಲು, ಆರೋಗ್ಯಕರ ಕೂದಲು ಸ್ಪರ್ಧೆ ಹೇರ್ ಇನ್ ರಿವೈಂಡ್ ಸ್ಪರ್ಧೆಗಳು ನಡೆಯಲಿವೆ ಎಂದರು.
ಒತ್ತಡ ನಿರ್ವಹಣಾ ಕಾರ್ಯಕ್ರಮ:
ಇಂದಿನ ವೇಗದ ಜೀವನಶೈಲಿ, ಹೆಚ್ಚುತ್ತಿರುವ ಜವಾಬ್ದಾರಿಗಳು, ಉದ್ಯೋಗ-ಕುಟುಂಬ ಸಮತೋಲನದ ಒತ್ತಡ, ಮಾನಸಿಕ ಅಶಾಂತಿ, ಆತಂಕ ಮತ್ತು ನಿದ್ರಾಹೀನತೆ ಸಮಸ್ಯೆಗಳಿಗೆ ಯೋಗಾಧಾರಿತ ಶಾಶ್ವತ ಪರಿಹಾರವನ್ನು ನೀಡುವ ಉದ್ದೇಶದಿಂದ ವಿಶೇಷ ಒತ್ತಡ ನಿರ್ವಹಣಾ ಹಾಗೂ ಧ್ಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಆಯುಷ್ ಹಬ್ಬ ಸಮಿತಿ ಮಾಧ್ಯಮ ಮುಖ್ಯಸ್ಥ ಡಾ.ದೇವದಾಸ್ ಪುತ್ರನ್, ಫಾದರ್ ಮುಲ್ಲರ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಡಾ.ಜ್ಯೋತ್ಸ್ನಾ, ಆಳ್ವಾಸ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಡಾ.ಸುಶಿಕ್ಷಿತಾ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ. ಶ್ರುತಿ ಶರ್ಮ, ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ.ಚೈತ್ರಾ ಹೆಬ್ಬಾರ್, ನರಿಂಗಾನ ಯೇನೆಪೋಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಡಾ. ಸಂಗೀತಲಕ್ಷ್ಮಿ ಇದ್ದರು.