ಜ.5 ರಂದು ಬೈಕಾಡಿ ಪ್ರಶಸ್ತಿ ಪ್ರದಾನ

ಜ.5 ರಂದು ಬೈಕಾಡಿ ಪ್ರಶಸ್ತಿ ಪ್ರದಾನ

ಮಂಗಳೂರು: ನಾಟಕ ನಿರ್ದೇಶಕರಾಗಿ, ಮಾನವ ಸಂಪನ್ಮೂಲ ತರಬೇತುದಾರರಾಗಿ, ಕಲಾರಾಧಕರಾಗಿ ಗುರುತಿಸಿಕೊಂಡಿದ್ದ ಬೈಕಾಡಿ ಜನಾರ್ದನ ಆಚಾರ್ ಅವರ 75ನೇ ಹಟ್ಟುಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮ ಜ.5ರಂದು ಸಂಜೆ 4ಕ್ಕೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರಗಲಿದ್ದು ಈ ಸಂದರ್ಭದಲ್ಲಿ ಮೂವರಿಗೆ ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಬೈಕಾಡಿ ಪ್ರತಿಷ್ಠಾನದ ಕಾರ್ಯದರ್ಶಿ ಭರತ್ ರಾಜ್ ಬೈಕಾಡಿ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಕಾಡಿ ಜನಾರ್ದನ ಆಚಾರ್ ಅವರ ಧ್ಯೇಯೋದ್ದೇಶಗಳನ್ನು ಮುಂದುವರಿಸಿಕೊಂಡು ಹೋಗುವ ಮತ್ತು ಶಿಕ್ಷಣ, ಕಲೆ, ಸಾಹಿತ್ಯ, ಸಮಾಜಸೇವೆ ಹಾಗೂ ಲಲಿತಕಲೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 2021ರಲ್ಲಿ ಪ್ರತಿಷ್ಠಾನ ಹುಟ್ಟುಹಾಕಿ ಪ್ರತಿ ವರ್ಷ ಬೈಕಾಡಿಯವರ ಹುಟ್ಟು ಹಬ್ಬದಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತರಿಗೆ ಪ್ರಶಸ್ತಿ ನೀಡುತ್ತಾ ಬರಲಾಗಿದೆ. ಈ ಬಾರಿ 75ನೇ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಬೈಕಾಡಿ ಜನಾರ್ದನ್ ಆಚಾರ್ ಪ್ರಶಸ್ತಿಯೊಂದಿಗೆ ಮತ್ತಿಬ್ಬರಿಗೆ ಗೌರವ ಪುರಸ್ಕಾರ ನೀಡಲಾಗುವುದು. ಹಿರಿಯ ಜನಪದ ಕಲಾವಿದ ರಮೇಶ್ ಕಲ್ಮಾಡಿ ಅವರಿಗೆ ಜನಪದ ವಿದ್ವಾಂಸ ಡಾ. ಕೆ.ಚಿನ್ನಪ್ಪ ಗೌಡ ಅವರು ‘ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ‘ ನೀಡಲಿದ್ದಾರೆ. ಹಿರಿಯ ಭರತನಾಟ್ಯ ಗುರು ಮೋಹನ್ ಕುಮಾರ್ ಉಳ್ಳಾಲ ಅವರಿಗೆ ‘ಜೀವಮಾನ ಸಾಧನಾ ಪುರಸ್ಕಾರ‘ ಮತ್ತು ಶಿಕ್ಷಕ, ಪಕ್ಷಿವೀಕ್ಷಕ ಹಾಗೂ

ಕಲಾವಿದ ಅರವಿಂದ ಕುಡ್ಲ ಅವರಿಗೆ ‘ಯುವ ಪುರಸ್ಕಾರ‘ ನೀಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನೃತ್ಯ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ನೃತ್ಯ ಗುರುಗಳ ಭಾವಚಿತ್ರ ಹಾಗೂ ವಿವರವನ್ನೊಳಗೊಂಡ ಕ್ಯಾಲೆಂಡರ್ ನ್ನು ಡಾ. ಎಂ. ಮೋಹನ ಆಳ್ವ ಅವರು ಬಿಡುಗಡೆಗೊಳಿಸಲಿದ್ದಾರೆ. ಸಮಾರಂಭದಲ್ಲಿ ಶಾಸಕ ವಿ.ಸುನಿಲ್ ಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಡಾ. ರಾಮಕೃಷ್ಣ ಆಚಾರ್ಯ, ಸುಧಾಕರ ಆಚಾರ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಮಂಡ್ಯ ರಮೇಶ್ ಅವರ ನಟನ ರಂಗಶಾಲೆ ಮೈಸೂರು ಇಲ್ಲಿನ ಕಲಾವಿದರಿಂದ ‘ಭಾಸ ಪಂಚಕ‘ ಎಂಬ ಕನ್ನಡ ನಾಟಕದ ಪ್ರಸ್ತುತಿ ನಡೆಯಲಿದೆ ಎಂದು ಅವರು ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷೆ ರತ್ನಾವತಿ ಜೆ.ಬೈಕಾಡಿ, ಟ್ರಸ್ಟಿ ರೇಖಾ ಬಿ.ಬೈಕಾಡಿ, ಮಾರ್ಗದರ್ಶಕಿ ಮಾಧುರಿ ಶ್ರೀರಾಮ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article