ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಜಿಲ್ಲಾಧಿಕಾರಿಗಳು ಭಗವಾಧ್ವಜ ಹಾರಿಸಿರುವುದು ಅನಪೇಕ್ಷಿತ ವಿಚಾರ-ಅದನ್ನು ಸರ್ಕಾರವೇ ವಿವಾದಕ್ಕೆ ಎಳೆಯುತ್ತಿರುವುದು ಸರಿಯಲ್ಲ: ವಜ್ರದೇಹಿ ಸ್ವಾಮೀಜಿ
ಮಂಗಳೂರಿನಲ್ಲಿ ವಿಹಿಂಪ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯ ಉತ್ಸವದ ಮೆರವಣಿಗೆಗೆ ಚಾಲನೆ ನೀಡುವ ಸಂದರ್ಭ ಉಡುಪಿ ಜಿಲ್ಲಾಧಿಕಾರಿಗಳು ಭಗವಾಧ್ವಜ ಹಾರಿಸಿರುವುದಕ್ಕೆ ಮಾಜಿ ಸಚಿವ ರಮಾನಾಥ ರೈಗಳು ಆಕ್ಷೇಪ ಎತ್ತಿದ್ದಾರೆ. ಪರ್ಯಾಯದ ನಡವಳಿಕೆಗಳ ಬಗ್ಗೆ ಇಲ್ಲಿನ ನಾಯಕರಿಗೆ ಅರಿವು ಇದ್ದಂತಿಲ್ಲ. ಅದನ್ನು ಅವರೇ ಅರಿತುಗೊಳ್ಳಬೇಕು. ಭಗವಾಧ್ವಜ ಎಂಬುದು ಧರ್ಮ ಧ್ವಜ ಆಗಿದ್ದು, ಅದನ್ನು ಹಾರಿಸುವುದರಲ್ಲಿ ಯಾವುದೇ ತಪ್ಪು ಇಲ್ಲ.ಜಿಲ್ಲಾಧಿಕಾರಿಗಳು ಸರ್ಕಾರದ ಭಾಗವಾಗಿದ್ದು, ಈ ವಿಚಾರದಲ್ಲಿ ಡಿಸಿ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ಹಿಂದಿನ ಕಮಿಷನರ್ ಅವರು ಅಲ್ಲಿ ನೃತ್ಯಕ್ಕೆ ಹೆಜ್ಜೆ ಹಾಕಿದ್ದರು. ಹಿಂದುಯೇತರರು ಹೊರೆಕಾಣಿಕೆ ಸಮರ್ಪಣೆ ಮಾಡಿದ್ದಾರೆ. ಇಂತಹ ಸಾಮರಸ್ಯದ ವಿಚಾರಗಳನ್ನು ವಿವಾದಕ್ಕೆ ಎಳೆಯಬಾರದು ಎಂದರು.
ಉಡುಪಿಲಿ ಸಮಾನ ಸತ್ಕಾರ:
ಈ ಬಾರಿ ಉಡುಪಿ ಪರ್ಯಾಯ ಉತ್ಸವದಲ್ಲಿ ಎಲ್ಲ ಸ್ವಾಮೀಜಿಗಳಿಗೂ ಸಮಾನತೆ ರೂಪಿಸಲಾಗಿದೆ. ಈ ಹಿಂದೆ ಆಯಾ ಸ್ವಾಮೀಜಿಯ ಸಮುದಾಯದವರಿಗೆ ಮಾತ್ರ ಅವಕಾಶ ಇತ್ತು. ಈ ಬಾರಿ ಅಲ್ಲಿನ ಶಾಸಕರ ನೇತೃತ್ವದಲ್ಲಿ ಎಲ್ಲ ಸ್ವಾಮೀಜಿಗಳನ್ನೂ ಸಮಾನವಾಗಿ ಸತ್ಕರಿಸಿರುವುದು ಸಂತಸ ತಂದಿದೆ ಎಂದರು.
ಪಂಚ ಪರಿವರ್ತನೆಗಳ ಅನುಷ್ಠಾನಕ್ಕೆ ಹಿಂದು ಸಮಾಜೋತ್ಸವಗಳನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಹಲವು ಕಡೆ ಸಮಾಜೋತ್ಸವ ನಡೆದಿದ್ದು, ಸಮಾಜದಲ್ಲಿನ ತಾರತಮ್ಯ ನಿವಾರಣೆಗೆ ಶಕ್ತಿಮೀರಿ ಶ್ರಮಿಸಲಾಗುತ್ತಿದೆ. ಶೇ. 80ರಷ್ಟು ಪರಿವರ್ತನೆಯನ್ನು ಸಮಾಜದಲ್ಲಿ ತರುವಲ್ಲಿ ಸಫಲರಾಗಿದ್ದೇವೆ. ಈ ಮೊದಲು ಸ್ವಾಮೀಜಿಗಳ ಪಾದ ಸೇವೆಯನ್ನು ಮೇಲ್ವರ್ಗದವರು ಮಾಡುತ್ತಿದ್ದರೆ, ಈಗ ಸಾಮಾನ್ಯರೂ ಪಾದಸೇವೆ ಮಾಡುತ್ತಿದ್ದಾರೆ. ಇದು ಸಮಾಜದಲ್ಲಿ ಕಾಣುತ್ತಿರುವ ಬದಲಾವಣೆಯಾಗಿದೆ ಎಂದರು.