ಧ್ಯಾನದಿಂದ ಸ್ವರ್ಗಸುಖ, ಸೇವೆ ಮಾಡಿದರೆ ಆತ್ಮಕಲ್ಯಾಣ: ಪ್ರೇಮನಾಥ್

ಧ್ಯಾನದಿಂದ ಸ್ವರ್ಗಸುಖ, ಸೇವೆ ಮಾಡಿದರೆ ಆತ್ಮಕಲ್ಯಾಣ: ಪ್ರೇಮನಾಥ್

 ಧರ್ಮಸ್ಥಳದಲ್ಲಿ ಧ್ಯಾನ ಮಹಾಯಜ್ಞ


ಉಜಿರೆ: ಬುದ್ಧಿಯನ್ನು ಜಾಗೃತಗೊಳಿಸಲು ಧ್ಯಾನ ಅಗತ್ಯ. ಸುಲಭವಾದ ಧ್ಯಾನಮಾರ್ಗದಿಂದ ಸ್ವರ್ಗಸುಖವನ್ನು ಅನುಭವಿಸಬಹುದು. ಏಕಾಗ್ರತೆಯಿಂದ ಧ್ಯಾನ ಮಾಡಿದರೆ ಮನಸ್ಸು ಮತ್ತು ಬುದ್ಧಿ ನಮ್ಮ ಸ್ವಾಧೀನದಲ್ಲಿರುತ್ತದೆ ಎಂದು ಬೆಂಗಳೂರಿನ ಪ್ರೇಮನಾಥ್ ಹೇಳಿದರು.


ಅವರು ಗುರುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಬೆಂಗಳೂರಿನ ವಿಶ್ವಚೈತನ್ಯ ಕ್ವಾಂಟಮ್ ಫೌಂಡೇಶನ್ ನೇತೃತ್ವದಲ್ಲಿ ಆಯೋಜಿಸಿದ ಧ್ಯಾನ ಮಹಾಯಜ್ಞವನ್ನು ಉದ್ಘಾಟಿಸಿ ಮಾತನಾಡಿದರು.


ತನು, ಮನ, ಧನದ ಮೂಲಕ ತ್ರಿಕರಣಪೂರ್ವಕ ಸ್ನೇಹದಿಂದ, ಪ್ರೀತಿ-ವಿಶ್ವಾಸದೊಂದಿಗೆ ಇತರರಿಗೆ ಸೇವೆ ಕೊಡುವುದನ್ನು ಕಲಿತುಕೊಳ್ಳಬೇಕು. ಸೇವೆ ಮಾಡಿದರೆ ಆತ್ಮಕಲ್ಯಾಣವೂ ಆಗುತ್ತದೆ. ಎಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ಗೌರವದೊಂದಿಗೆ ಸಸ್ಯಹಾರಿಗಳಾಗಿ ಸುಖ-ಶಾಂತಿ, ನೆಮ್ಮದಿಯ, ಸಾಮರಸ್ಯದ ಬದುಕು ನಡೆಸಿದಾಗ ಜೀವನ ಪಾವನವಾಗುತ್ತದೆ ಎಂದರು.

ಧ್ಯಾನ ಮಹಾಯಜ್ಞಕ್ಕೆ ಯಾವುದೇ ಪಠ್ಯ, ತರಗತಿ ಅಥವಾ ಶಿಕ್ಷಕರ ಅಗತ್ಯವಿಲ್ಲ. ಸ್ವಯಂ ಪ್ರೇರಣೆಯಿಂದ, ಇಚ್ಛಾಶಕ್ತಿಯಿಂದ ಧ್ಯಾನದ ಕಲೆಯನ್ನು ಎಲ್ಲರೂ ಕರಗತಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ನ ಯೋಗ ನಿರ್ದೇಶಕ ಡಾ. ಶಶಿಕಾಂತ್ ಜೈನ್ ಮಾತನಾಡಿ, ಆರೋಗ್ಯವೇ ಭಾಗ್ಯವಾಗಿದ್ದು, ಎಲ್ಲರ ಯೋಗಕ್ಷೇಮ ಹಾಗೂ ಆರೋಗ್ಯಭಾಗ್ಯ ರಕ್ಷಣೆಗಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಭಾರತದ ಪ್ರಾಚೀನ ಪಾರಂಪರಿಕ ಚಿಕಿತ್ಸಾ ಪದ್ಧತಿಗಳಾದ ಆಯುರ್ವೇದ, ಹೋಮಿಯೊಪತಿ, ಪ್ರಕೃತಿ ಚಿಕಿತ್ಸಾ ವಿಧಾನ ಮತ್ತು ಯೋಗಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಧರ್ಮಸ್ಥಳದ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನಪರಂಪರೆ ವಿಶ್ವವಿಖ್ಯಾತವಾಗಿದೆ ಎಂದರು.

‘ಧ್ಯಾನದಿಂದ ಜ್ಞಾನ, ಜ್ಞಾನದಿಂದ ಮುಕ್ತಿ’ ಎಂಬ ಧ್ಯೇಯವಾಕ್ಯದೊಂದಿಗೆ ಜ.25ರ ವರೆಗೆ ಪ್ರತಿದಿನ ಏಳು ಗಂಟೆಗಳ ಕಾಲ ಸುಶ್ರಾವ್ಯ ಸಂಗೀತದೊಂದಿಗೆ ಧ್ಯಾನಮಹಾಯಜ್ಞ ನಡೆಯುತ್ತದೆ.

ಗುರುವಾರ ನಡೆದ ಧ್ಯಾನ ಮಹಾಯಜ್ಞದಲ್ಲಿ ದೇಶದ ನಾನಾ ಭಾಗಗಳಿಂದ ಸಾವಿರಕ್ಕೂ ಮಿಕ್ಕಿ ಪ್ರತಿನಿಧಿಗಳು ಸಕ್ರಿಯವಾಗಿ ಭಾಗಹಿಸುತ್ತಿದ್ದಾರೆ.

ಹಿರಿಯ ವಿದ್ವಾಂಸ ಪತ್ರೀಜಿ ಅವರ ಮಾರ್ಗದರ್ಶದಲ್ಲಿ ಹಿರಿಯ ಧ್ಯಾನಿಗಳಾದ ಪ್ರಕಾಶಬಾಬು, ವಿನುತಾ, ಲಲಿತಾನಾರಾಯಣ ವಗ್ಗ, ಮಂಜುನಾಥ್ ಮೊದಲಾದವರು ವಿಶೇಷ ಉಪನ್ಯಾಸ, ಮಾರ್ಗದರ್ಶನ ನೀಡುತ್ತಿದ್ದಾರೆ.

ದಿನವಿಡಿ ಸತ್ಸಂಗ, ಪ್ರಾರ್ಥನೆ, ಜಪ, ತಪ, ಧ್ಯಾನ, ಸಂಗೀತ ನಡೆಯುತ್ತದೆ.

ಸಾಯಿಕೀರ್ತಿನಾಥ ಸ್ವಾಮೀಜಿ, ಬಿ. ಶಿವರಾಮಪ್ಪ, ಶ್ರೀನಿವಾಸ್ ಮತ್ತು ದಿವ್ಯ, ಪ್ರೇಮನಾಥ್, ಯೋಗಮಿತ್ರ ಡಾ. ಸುಬ್ಬು ಭಯ್ಯ ಮೊದಲಾದವರು ಭಾಗವಹಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಜ.25 ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಧ್ಯಾನ ಮಹಾಯಜ್ಞದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article