ಕಾಂಗ್ರೆಸ್ ಸರ್ಕಾರದ ‘ಶವಯಾತ್ರೆಯನ್ನು’ ಮಾಡಲು ರಾಜ್ಯದ ಜನತೆಯೇ ನಿರ್ಧರಿಸಿದ್ದಾರೆ: ಶಾಸಕ ಕಾಮತ್
ರಾಜ್ಯ ಕಾಂಗ್ರೆಸ್ ಸರ್ಕಾರದ ಅವ್ಯವಸ್ಥೆಯಿಂದಾಗಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಇ-ಖಾತಾ ಸಮಸ್ಯೆ ತಾರಕಕ್ಕೇರಿದೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಆದಾಯವೂ ಕಡಿಮೆಯಾಗುತ್ತಿದೆ. ನಗರದ ಜೈಲ್ ಜಾಮರ್ ಸಮಸ್ಯೆ ಬಗ್ಗೆ ಕೆ.ಡಿ.ಬಿ ಸಭೆ, ಪ್ರತಿಭಟನೆ, ಅಧಿವೇಶನ ಹೀಗೆ ಎಲ್ಲಾ ರೀತಿಯಲ್ಲೂ ಸರ್ಕಾರದ ಗಮನ ಸೆಳೆದರೂ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಶತಮಾನಗಳಿಂದ ಆಚರಿಸಿಕೊಂಡು ಬಂದಂತಹ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಕಾನೂನು ನಿಯಮಗಳ ಹೆಸರಿನಲ್ಲಿ ಅಡ್ಡಿಪಡಿಸಲಾಗುತ್ತಿದ್ದು, ಜೂಜು ರಹಿತ ಕೋಳಿ ಅಂಕಕ್ಕೂ ಅವಕಾಶ ನೀಡಲಾಗುತ್ತಿಲ್ಲ. ಇದನ್ನೆಲ್ಲಾ ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಒಬ್ಬೇ ಒಬ್ಬ ಕಾಂಗ್ರೆಸ್ ನಾಯಕ ಪ್ರಯತ್ನಿಸದೇ ಈಗ ಪಾದಯಾತ್ರೆ ಮಾಡಲು ಹೊರಟರೆ ಜನ ನಗುತ್ತಾರೆ ಎಂದರು.
ಈ ಹಿಂದೆ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದಂತಹ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ-1 ರ ಅನುದಾನವನ್ನು ತಡೆಹಿಡಿಯಲಾಗಿದ್ದು ಕಾಮಗಾರಿಗಳೆಲ್ಲವೂ ಅದಕ್ಕೆ ನಿಂತಿವೆ. ದೇವಸ್ಥಾನಕ್ಕೆ ಮಂಜೂರಾಗಿದ್ದ ಅನುದಾನಗಳನ್ನೂ ಸಹ ತಡೆಹಿಡಿಯಲಾಗಿದೆ. ಹೋರಾಟದ ನಂತರ ಸ್ಥಾಪನೆಯಾದ ನಾರಾಯಣ ಗುರು ನಿಗಮ, ಬಂಟ್ಸ್ ನಿಗಮಕ್ಕೆ ಇದುವರೆಗೆ ಅಧ್ಯಕ್ಷರೂ ಇಲ್ಲ, ಅನುದಾನವೂ ಇಲ್ಲ. ತುಳು ನಿಗಮ, ಕೊಂಕಣಿ ನಿಗಮ, ಬ್ಯಾರಿ ನಿಗಮ, ಕೊಡವ ನಿಗಮ ಹೀಗೆ ಬಹುತೇಕ ನಿಗಮಗಳಿಗೆ ಒಂದು ರೂಪಾಯಿ ಕೂಡ ನೀಡಿಲ್ಲ. ಭ್ರಷ್ಟಾಚಾರಕ್ಕೆ ಅನುವಾಗುವಂತೆ ಮೂಡಾದ ಎಲ್ಲಾ ಪ್ರಮುಖ ಕಾರ್ಯಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಆರೋಗ್ಯ ಕ್ಷೇತ್ರ ಸೇರಿದಂತೆ ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನೇಕರ ವೇತನ ಆಗಿಲ್ಲ. ಬಜೆಟ್‌ನಲ್ಲಿ ನುಡಿದಂತೆ ನಡೆಯದೇ ಆಶಾ-ಅಂಗನವಾಡಿ ಕಾರ್ಯಕರ್ತರಿಗೆ ಮೋಸ ಮಾಡಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಒಬ್ಬೇ ಒಬ್ಬ ಜವಾಬ್ದಾರಿಯುತ ಕಾಂಗ್ರೆಸ್ ನಾಯಕ ಧ್ವನಿ ಎತ್ತಿದ್ದಾರಾ ಎಂದು ಶಾಸಕರು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.