ಕ್ರೀಡೆಗೆ ಬಿಜೆಪಿ ಸರ್ಕಾರ ಮಂಜೂರುಗೊಳಿಸಿದ್ದ ಅನುದಾನಕ್ಕೆ ಕೊನೆಗೂ ಅನುಮೋದನೆ: ಕಾಮತ್
ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಹಿಂದಿನ ಬಿಜೆಪಿ ಸರ್ಕಾರ ಮಂಜೂರುಗೊಳಿಸಿದ್ದ ಅನುದಾನದಲ್ಲಿ ರೂ.35 ಲಕ್ಷದ ನೂತನ ಬದಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಇಲಾಖೆಯ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎರಡೂವರೆ ವರ್ಷಗಳೇ ಕಳೆದಿತ್ತು. ಅಂದಿನಿಂದಲೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ನಿರಂತರವಾಗಿ ಕೋರಿದ ಹೊರತಾಗಿಯೂ ಸಹ ಯಾವುದೇ ಸೂಕ್ತ ಸ್ಪಂದನೆ ದೊರಕಿರಲಿಲ್ಲ. ಇದರಿಂದ ಕ್ರೀಡಾ ಚಟುವಟಿಕೆಗಳಿಗೆ ಸಾಕಷ್ಟು ಹಿನ್ನಡೆಯಾಗುತ್ತಿದ್ದ ಬಗ್ಗೆ ಅನೇಕ ಕ್ರೀಡಾಪಟುಗಳು ನನ್ನಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದರು ಎಂದರು.
ಇದೀಗ ಅಂತಿಮವಾಗಿ 35 ಲಕ್ಷದಂತಹ ಸಣ್ಣ ಮೊತ್ತದ ಬಗ್ಗೆ ಅಧಿವೇಶನದಲ್ಲಿಯೇ ಪ್ರಶ್ನೆ ಹಾಕಿದ ಕಾರಣ, ಸರ್ಕಾರಕ್ಕಾಗುವ ಮುಜುಗರದಿಂದ ತಪ್ಪಿಸಿಕೊಳ್ಳಲು "ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರ ಕೋರಿಕೆಯಂತೆ, ಮ.ನ.ಪಾ ವ್ಯಾಪ್ತಿಯ 28ನೇ ಮಣ್ಣಗುಡ್ಡ ವಾರ್ಡಿನ ಕ್ರೀಡಾಂಗಣ ಪಕ್ಕದಲ್ಲಿರುವ ಸ್ಕೇಟಿಂಗ್ ಟ್ರ್ಯಾಕ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿರುವ ಮ.ನ.ಪಾ ವ್ಯಾಪ್ತಿಯ 26ನೇ ದೇರೇಬೈಲ್ ನೈರುತ್ಯ ವಾರ್ಡಿನ ಮಂಗಳಾ ವಾಲಿಬಾಲ್ ಕ್ರೀಡಾಂಗಣದ ಮುಂದುವರೆದ ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿರುತ್ತದೆ" ಎಂದು ಆದೇಶ ಹೊರಡಿಸಲಾಗಿದೆ. ಎರಡೂವರೆ ವರ್ಷ ಕಾಯಿಸಿಯಾದರೂ ಅನುಮೋದನೆ ನೀಡಿರುವುದಕ್ಕೆ ಧನ್ಯವಾದಗಳು ಎಂದು ಶಾಸಕರು ಇದೇ ವೇಳೆ ಪ್ರತಿಕ್ರಿಯಿಸಿದರು.