ನಾಡಗೀತೆ-ಕಡ್ಡಾಯ ಆದೇಶ ಅಸಮರ್ಪಕ: ಮಾಣಿಕ್ಯರಾಜ್
ಮಂಗಳೂರು: ಕುವೆಂಪು ಅವರು ರಚಿಸಿರುವ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯ ‘ಜಯ ಭಾರತ ಜನನಿಯ ತನುಜಾತೆ’ ನಾಡಗೀತೆಯ ಅವಧಿ ಅತಿ ಉದ್ದವಾಗಿದ್ದು, ಮಕ್ಕಳಿಗೆ ಹಾಡುವುದು ಕಷ್ಟಸಾಧ್ಯವಾಗಿದೆ. 2.30 ನಿಮಿಷ ಅವಧಿಯ ಈ ಹಾಡನ್ನು ಶಾಲೆಗಳಲ್ಲಿ ಬೆಳಗ್ಗಿನ ವೇಳೆ, ವಿಶೇಷ ಕಾರ್ಯಕ್ರಮಗಳಲ್ಲಿ, ಸರಕಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಹಾಡುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿರುವುದು ಅಸಮರ್ಪಕ ನಿರ್ಧಾರವಾಗಿದೆ ಎಂದು ಮಂಗಳೂರು ಮೂಲದ ಗಾಯಕ, ರಾಗ ಸಂಯೋಜಕ ಮಾಣಿಕ್ಯರಾಜ್ ಹೇಳಿದರು.
‘ಜಯ ಭಾರತ ಜನನಿಯ ತನುಜಾತೆ’ ಹಾಡನ್ನು 2004ರಲ್ಲಿ ಎಸ್.ಎಂ. ಕೃಷ್ಣ ಸರಕಾರ ನಾಡಗೀತೆ ಎಂದು ಅಂಗೀಕರಿಸಿತ್ತು. 2022ರಲ್ಲಿ ಬಸವರಾಜ ಬೊಮ್ಮಾಯಿ ಸರಕಾರ ಎಚ್.ಆರ್. ಲೀಲಾವತಿ ಅವರ ನೇತೃತ್ವದ ಆಯ್ಕೆ ಸಮಿತಿಯ ಶಿಫಾರಸಿನಂತೆ ಮೈಸೂರು ಅನಂತಸ್ವಾಮಿ ಅವರ ರಾಗಸಂಯೋಜನೆಯನ್ನು ಅಂತಿಮಗೊಳಿಸಿ, 2.30 ನಿಮಿಷ ಅವಽಯ ಈ ಹಾಡನ್ನು ನಾಡಗೀತೆಯನ್ನಾಗಿ ಅನುಮೋದನೆ ನೀಡಿತ್ತು. ಈ 18 ವರ್ಷಗಳ ಅವಧಿಯಲ್ಲಿ ಮೈಸೂರು ಅನಂತಸ್ವಾಮಿ ಹಾಗೂ ಸಿ. ಅಶ್ವಥ್ ಹೊರತಾಗಿ ರಾಜ್ಯದ ಬೇರೆ ಸಂಗೀತ ಸಂಯೋಜಕರಿಂದ ಈ ಹಾಡಿಗೆ ರಾಗ ಸಂಯೋಜನೆ ಆಹ್ವಾನ ಮಾಡಬಹುದಿತ್ತು. ಎಚ್.ಆರ್. ಲೀಲಾವತಿ ಅವರ ಆಯ್ಕೆ ಸಮಿತಿಗೆ ನಾನು ಎರಡು ರಾಗಗಳನ್ನು ಅಳವಡಿಸಿ ನೀಡಿದ್ದೆ. ಆದರೆ, ಸಮಿತಿ ನಿರ್ಧಾರದಂತೆ ಅನಂತಸ್ವಾಮಿ ಅವರ ರಾಗವನ್ನೇ ಅಂತಿಮಗೊಳಿಸಲಾಗಿತ್ತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ನಾಡಗೀತೆ ಸಾಮಾನ್ಯವಾಗಿ ಒಂದು ನಿಮಿಷದ ಒಳಗೆ ಇರಬೇಕು. ಆದರೆ, ‘ಜಯ ಭಾರತ ಜನನಿಯ ತನುಜಾತೆ’ ಹಾಡು ಏಳು ಪ್ಯಾರಾ ಹೊಂದಿದ್ದು, 2.30 ನಿಮಿಷ ಅವಧಿ ಹೊಂದಿದೆ. 44 ಸಾಲುಗಳಿವೆ, ಈ ಹಾಡಿನಲ್ಲಿ 28 ಹೆಸರುಗಳಿವೆ. ಮಕ್ಕಳು ಈ ಹೆಸರುಗಳನ್ನು ನೆನಪಿಟ್ಟುಕೊಂಡು 2.30 ನಿಮಿಷಗಳ ಕಾಲ ಹಾಡುವುದು ಕಷ್ಟಸಾಧ್ಯ. ಸರಕಾರದ ಮಂತ್ರಿಗಳಿಗೇ ಈ ಹಾಡನ್ನು ಹಾಡುವುದು ಕಷ್ಟವಾಗುತ್ತಿದೆ. 2.30 ನಿಮಿಷಗಳ ನಾಡಗೀತೆಯನ್ನು ಹಾಡುವುದು ತಾಂತ್ರಿಕವಾಗಿ, ಪ್ರಾಯೋಗಿಕವಾಗಿ, ಪರಂಪರಗತವಾಗಿ ಕಷ್ಟಸಾಧ್ಯ ಎಂದರು.