ಮತ ಪತ್ರ ಬಳಕೆಗೆ ಸ್ವಾಗತ-ಪ್ರಜಾಪ್ರಭುತ್ವ ಬಲಪಡಿಸುವ ಮಹತ್ವದ ಹೆಜ್ಜೆ: ತಾಹಿರ್ ಹುಸೇನ್

ಮತ ಪತ್ರ ಬಳಕೆಗೆ ಸ್ವಾಗತ-ಪ್ರಜಾಪ್ರಭುತ್ವ ಬಲಪಡಿಸುವ ಮಹತ್ವದ ಹೆಜ್ಜೆ: ತಾಹಿರ್ ಹುಸೇನ್

ಮಂಗಳೂರು: ದೇಶದಲ್ಲಿ ಸ್ವತಂತ್ರ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆಗಳು ನಡೆಯಬೇಕಾದರೆ ಮತದಾರರಲ್ಲಿ ವಿಶ್ವಾಸ ಮೂಡಿಸುವ ವ್ಯವಸ್ಥೆ ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ ಪತ್ರ ಬಳಕೆಯನ್ನು ಪುನಃ ಜಾರಿಗೊಳಿಸುವ ಕ್ರಮವನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ, ವಕೀಲ ತಾಹಿರ್ ಹುಸೇನ್ ಹೇಳಿದರು.

ಇವಿಎಂ ವ್ಯವಸ್ಥೆಯ ಬಗ್ಗೆ ದೇಶದಾದ್ಯಂತ ಹಲವು ಸಂಶಯಗಳು, ಆತಂಕಗಳು ಹಾಗೂ ಚರ್ಚೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ ಪತ್ರ ಬಳಕೆ ಮತದಾರರ ವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಬಲಪಡಿಸುತ್ತದೆ. ಮತದಾನದ ಪ್ರತಿ ಹಂತವೂ ಸಾರ್ವಜನಿಕವಾಗಿ ಪರಿಶೀಲಿಸಬಹುದಾದ ವ್ಯವಸ್ಥೆಯೇ ನಿಜವಾದ ಪ್ರಜಾಪ್ರಭುತ್ವದ ಆತ್ಮವಾಗಿದೆ ಎಂದರು.

ಮತ ಪತ್ರ ಪದ್ಧತಿಯಲ್ಲಿ ಮತದಾನ, ಎಣಿಕೆ ಮತ್ತು ಫಲಿತಾಂಶ ಪ್ರಕ್ರಿಯೆ ಸ್ಪಷ್ಟವಾಗಿದ್ದು, ಯಾವುದೇ ತಂತ್ರಜ್ಞಾನ ದೋಷ ಅಥವಾ ದುರುಪಯೋಗದ ಅನುಮಾನಗಳಿಗೆ ಅವಕಾಶ ಕಡಿಮೆ. ಇದು ಗ್ರಾಮೀಣ ಪ್ರದೇಶಗಳು ಸೇರಿದಂತೆ ಎಲ್ಲ ವರ್ಗದ ಮತದಾರರಿಗೆ ಸುಲಭವಾಗಿ ಅರ್ಥವಾಗುವ ಹಾಗೂ ನಂಬಿಕೆ ಮೂಡಿಸುವ ವಿಧಾನವಾಗಿದೆ. ಆದ್ದರಿಂದ ರಾಜ್ಯದ ಚುನಾವಣಾ ಆಯೋಗ ಹಾಗೂ ಸರ್ಕಾರವು ಮತ ಪತ್ರ ಬಳಕೆಯನ್ನು ವ್ಯಾಪಕವಾಗಿ ಜಾರಿಗೆ ತಂದು, ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕೆಂದು ನಾವು ಆಗ್ರಹಿಸುತ್ತೇವೆ. ಜನರ ಮತದ ಮೌಲ್ಯಕ್ಕೆ ಗೌರವ ನೀಡುವ ಯಾವುದೇ ಕ್ರಮವನ್ನು ವೆಲ್ಫೇರ್ ಪಾರ್ಟ ಆಫ್ ಇಂಡಿಯಾ ಬೆಂಬಲಿಸುತ್ತದೆ ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article