ಪರ್ಯಾಯ ಸ್ವಾಮೀಜಿಗೆ ಪೌರ ಸಮ್ಮಾನ
ಪೌರ ಸಮ್ಮಾನ ಸ್ವೀಕರಿಸಿದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ, ಸಮಾಜದಲ್ಲಿ ಧರ್ಮ ರಕ್ಷಣೆ, ಧರ್ಮಪಾಲನೆಗೆ ಪರಮಾತ್ಮನ ನಾಮಸ್ಮರಣೆ ಅಗತ್ಯ. ಶ್ರೇಷ್ಠ ಜಾಗದಲ್ಲಿ ಪರಮಾತ್ಮನ ನಾಮಸ್ಮರಣೆಯಿಂದ ಪುಣ್ಯ ಲಭಿಸುತ್ತದೆ. ಮೋಕ್ಷದ ಸಂತೋಷಕ್ಕೆ ಶ್ರೀಕೃಷ್ಣನ ಅನುಗ್ರಹ ಬೇಕು. ಉಡುಪಿ ಪರ್ಯಾಯ ನಿಮ್ಮ ಪರ್ಯಾಯ, ಎಲ್ಲರೂ ಅಗಮಿಸಿ ಶ್ರೀ ಕೃಷ್ಣನ ಸೇವೆ ಮಾಡಬೇಕು ಎಂದು ಹೇಳಿದರು.
ಶ್ರೀ ಕ್ಷೇತ್ರ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಗುರು-ಶಿಷ್ಯರ ಸಂಬಂಧ ದೂರವಾಗುತ್ತಿದೆ. ಅಷ್ಟ ಮಠಗಳ ಸ್ವಾಮೀಜಿಗಳ ಪ್ರಯತ್ನದಿಂದ ಉಡುಪಿಯಲ್ಲಿ ಸಂಪ್ರದಾಯಬದ್ಧವಾಗಿ ಪರ್ಯಾಯ ನಡೆಯುತ್ತಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಧಾರ್ಮಿಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ವಾಗತ ಸಮಿತಿ ಮಂಗಳೂರು ಗೌರವಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡಿ, ಮಧ್ವಾಚಾರ್ಯರು ಹುಟ್ಟಿದ ಊರಿನಲ್ಲಿ ನಾವಿರುವುದು ಪುಣ್ಯ. ಮಧ್ವಾಚಾರ್ಯರ ಅನಂತರ ಮಧ್ವಮತ ಕಂಡ ಶ್ರೇಷ್ಠ ವ್ಯಕ್ತಿ ವಾದಿರಾಜರು. ಸಮಾಜದಲ್ಲಿ ಸಾಮರಸ್ಯ ತಂದುಕೊಟ್ಟವರು. ಭಕ್ತಿಪಂಥಕ್ಕೆ ಮೂಲ ಕಾರಣ ಸಾಧುಸಂತರು. ದಾಸವರೇಣ್ಯರ ತಲೆಮಾರು ಹುಟ್ಟಿಕೊಂಡದ್ದು, ಉಡುಪಿ ಗುರುಗಳ ಪ್ರೇರಣೆಯಿಂದ. ಸಮಾಜಕ್ಕೆ ಉಡುಪಿಯ ಕೊಡುಗೆ ಅನನ್ಯ. ಶ್ರೀ ವೇದವರ್ಧನ ತೀರ್ಥರು ಶೀರೂರು ಪರಂಪರೆಯ ವಾಮನ ತೀರ್ಥರ ಪರಂಪರೆಯಲ್ಲಿ ಬಂದವರು ಎಂದು ವಿವರಿಸಿದರು.
ಪೌರಸಮ್ಮಾನ ಕಾರ್ಯಕ್ರಮಕ್ಕೂ ಮುನ್ನ ಶರವು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಭವ್ಯವಾದ ಮೆರವಣಿಗೆ ಮೂಲಕ ಸ್ವಾಮೀಜಿಗಳಿಗೆ ಪೂರ್ಣಕುಂಭ ಸ್ವಾಗತಿಸಲಾಯಿತು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಡಿ. ವೇದವ್ಯಾಸ ಕಾಮತ್, ಮಾಜಿ ಮೇಯರ್‌ಗಳಾದ ಎಂ. ಶಶಿಧರ ಹೆಗ್ಡೆ, ಪ್ರೇಮಾನಂದ ಶೆಟ್ಟಿ, ಭಾಸ್ಕರ್ ಕೆ., ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾರದಾ ವಿದ್ಯಾ ಸಂಸ್ಥೆಗಳ ಟ್ರಸ್ಟಿ ಸಮೀರ್ ಪುರಾಣಿಕ್, ಪ್ರಮುಖರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಪುರುಷೋತ್ತಮ ಎಚ್.ಕೆ., ದಂಡತೀರ್ಥ ಸೀತಾರಾಮ ಆಚಾರ್ಯ, ಅರುಣ್ ಪ್ರಭ, ಸುಬ್ರಹ್ಮಣ್ಯ ರಾವ್ ಸಹಿತ ಮತ್ತಿತರರು ಇದ್ದರು.
ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿ ಶಾರದಾ ವಿದ್ಯಾ ಸಂಸ್ಥೆ ಟ್ರಸ್ಟಿ ಸುಧಾಕರ ರಾವ್ ಪೇಜಾವರ ಪ್ರಾಸ್ತಾವಿಸಿದರು. ಉಪನ್ಯಾಸಕ ದಯಾನಂದ ಕಟೀಲ್ ನಿರೂಪಿಸಿ, ಗುರುಪ್ರಸಾದ್ ವಂದಿಸಿದರು