ಮುಂಜಾಗ್ರತಾ ಕ್ರಮದ ಬಗ್ಗೆ ಶಾಸಕ ಕಾಮತ್ ಮನಪಾ ಅಧಿಕಾರಿಗಳೊಂದಿಗೆ ಅನೇಕ ಸ್ಥಳ ವೀಕ್ಷಣೆ
Tuesday, January 13, 2026
ಮಂಗಳೂರು: ಮ.ನ.ಪಾ ವ್ಯಾಪ್ತಿಯ ಅತ್ತಾವರ 5ನೇ ಅಡ್ಡ ರಸ್ತೆ, ಪಾಂಡೇಶ್ವರ, ಶಿವನಗರ, ಸುಭಾಷ ನಗರ ಮೊದಲಾದೆಡೆ ಕಳೆದ ಮಳೆಗಾಲದಲ್ಲಿ ಕೃತಕ ನೆರೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದ್ದು ಅದಕ್ಕೆ ಕಾರಣ, ತುರ್ತಾಗಿ ನಡೆಯಬೇಕಿರುವ ಕಾರ್ಯ, ಭವಿಷ್ಯದಲ್ಲಿ ಪ್ರವಾಹ ಮರುಕಳಿಸದಂತೆ ಎಚ್ಚರವಹಿಸುವುದು ಸೇರಿದಂತೆ ಮುಂಜಾಗ್ರತಾ ಕ್ರಮದ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಅಧಿಕಾರಿಗಳೊಂದಿಗೆ ಸ್ಥಳ ವೀಕ್ಷಣೆ ನಡೆಸಿದರು.
ರಾಜಕಾಲುವೆಯ ನೀರು ಹಾದು ಹೋಗಿ ಹೊಯ್ಗೆ ಬಜಾರ್ ಬಳಿ ನದಿ ಸೇರುವ ಭಾಗದಲ್ಲಿ ನೀರು ಸರಾಗವಾಗಿ ಹರಿಯಲು ಅಡಚಣೆಯಾಗದಂತೆ ತಕ್ಷಣ ಹೂಳೆತ್ತುವ (ಡ್ರೆಜ್ಜಿಂಗ್) ಕಾರ್ಯ ನಡೆಯಬೇಕು. ರಾಜಕಾಲುವೆಯ ಕುಸಿದ ಭಾಗಗಳಿಗೆ ತಕ್ಷಣ ದುರಸ್ತಿ ಕಾರ್ಯಕೈಗೊಳ್ಳಬೇಕು. ಪಾಂಡೇಶ್ವರ ಹಾಗೂ ಅಲ್ಬುಕರ್ಕ್ ಫ್ಯಾಕ್ಟರಿ ಬಳಿ ಇರುವಂತಹ ಬೃಹತ್ ಚರಂಡಿಗೆ ಅಡ್ಡಲಾಗಿರುವ ಸೇತುವೆಯ ಮರು ನಿರ್ಮಾಣದ ಬಗ್ಗೆ ಯೋಜನೆ ಸಿದ್ದಪಡಿಸಬೇಕು ಎಂದು ಸೂಚನೆ ನೀಡಿದರು. ಇದೇ ವೇಳೆ ಪಾಂಡೇಶ್ವರ ರೈಲ್ವೆ ಕ್ರಾಸಿಂಗ್ ನಿಂದಾಗಿ ಜನರಿಗಾಗುತ್ತಿರುವ ತೊಂದರೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ರೈಲ್ವೆ ಮೇಲ್ಸೇತುವೆಯ ಕಾರ್ಯಸಾಧ್ಯತೆಯ ವರದಿ ಸಿದ್ದಪಡಿಸುವಂತೆ ಶಾಸಕರು ಸೂಚಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕ್ಷೇತ್ರಕ್ಕೆ ಬಿಡಿಗಾಸು ದೊರೆತಿಲ್ಲ. ಹೀಗಾಗಿ ಅಭಿವೃದ್ಧಿ ಬಿಡಿ, ಸಣ್ಣಪುಟ್ಟ ತುರ್ತುಕ್ರಮಕ್ಕೂ ಹಿನ್ನಡೆಯಾಗಿದೆ. ಆದರೂ ಕ್ಷೇತ್ರದ ಜನತೆಯ ಹಿತ ದೃಷ್ಟಿಯಿಂದ ಈ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಗಳಾದ ದಿವಾಕರ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಬಿಜೆಪಿ ಪ್ರಮುಖರಾದ ನಿತಿನ್ ಕುಮಾರ್, ಶಿವನಗರ ನಾಗರಿಕ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಹಾಗೂ ಸಮಿತಿಯ ಪದಾಧಿಕಾರಿಗಳು, ಹಾಗೂ ಪಾಲಿಕೆ, ರೈಲ್ವೆ, ಬಂದರು, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
