ಸಹಕಾರ ಕಾಯ್ದೆಗೂ ಆರ್‌ಬಿಐ ನಿಯಮಾವಳಿಗೂ ಬಹಳ ವ್ಯತ್ಯಾಸ ಇದೆ: ಡಾ. ಎಂ.ಎನ್.ರಾಜೇಂದ್ರ ಕುಮಾರ್

ಸಹಕಾರ ಕಾಯ್ದೆಗೂ ಆರ್‌ಬಿಐ ನಿಯಮಾವಳಿಗೂ ಬಹಳ ವ್ಯತ್ಯಾಸ ಇದೆ: ಡಾ. ಎಂ.ಎನ್.ರಾಜೇಂದ್ರ ಕುಮಾರ್


ಮಂಗಳೂರು: ಸಹಕಾರಿ ಸಂಘಗಳು ಸಹಕಾರ ಕಾಯ್ದೆಯಡಿ ನೋಂದಣಿಯಾದರೂ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ನಿಯಮಗಳನ್ನು ಕೂಡ ಪಾಲಿಸಬೇಕಾಗಿದೆ. ಸಹಕಾರ ಕಾಯ್ದೆಗೂ ಆರ್‌ಬಿಐ ನಿಯಮಾವಳಿಗೂ ಬಹಳ ವ್ಯತ್ಯಾಸ ಇದೆ. ಈ ಬಗ್ಗೆ ಮುಂದೆ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷರೂ ಆದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.


ಮಂಗಳೂರಿನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಮೈಸೂರು ವಿಭಾಗದ ಪಟ್ಟಣ ಸಹಕಾರಿ ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ  ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕರು ಮತ್ತು ಹಿರಿಯ ಅಧಿಕಾರಿಗಳಿಗೆ ಒಂದು ದಿನದ ರಾಜ್ಯ ಮಟ್ಟದ ಕಾರ್ಯದಕ್ಷತೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು  ಮಾತನಾಡಿದರು.

ಸಹಕಾರಿ ಸಂಘಗಳು ಸಹಕಾರ ಕಾಯ್ದೆಯಡಿ ನೋಂದಣಿಯಾಗಿದ್ದರೂ ಸಾಲ ನೀಡಿಕೆಯಲ್ಲಿ ಆರ್‌ಬಿಐ ಮಾರ್ಗದರ್ಶನವನ್ನು ಪಾಲಿಸಬೇಕಾಗಿದೆ. ಈ ಸಂದರ್ಭ ಎರಡನ್ನೂ  ಅಳವಡಿಸಿಕೊಂಡು ಮುನ್ನಡೆಯಬೇಕಾದ ಅನಿವಾರ್ಯತೆ ಬಂದೊದಗಿದೆ. ಆರ್‌ಬಿಐನ ಕೆಲವು ನಿಯಮಗಳನ್ನು ಅಳವಡಿಸಿಕೊಳ್ಳಲು ಕಷ್ಟವಾಗುತ್ತದೆ. ಸಹಕಾರಿ ಸಂಘಗಳು  ಕಟ್ಟಡ ನಿರ್ಮಿಸಿದರೆ ಅದರಲ್ಲಿ ಹೆಚ್ಚುವರಿ ಜಾಗವನ್ನು ಬಾಡಿಗೆಗೆ ನೀಡಲು ಅಥವಾ ತಮ್ಮಲ್ಲೇ ಇರಿಸಿಕೊಳ್ಳಲು ನಿಯಮದಲ್ಲಿ ಅವಕಾಶ ಇರುವುದಿಲ್ಲ. ಸಾಲದ ವಿಚಾರದಲ್ಲಿ  ಸುಸ್ತಿದಾರರ ಏಲಂ ಜಾಗವನ್ನು ಯಾರೂ ಪಡೆಯದಿದ್ದರೆ, ಅದಕ್ಕೆ ದಂಡ ವಿಧಿಸುತ್ತಾರೆ. ಹೀಗೆ ಸಹಕಾರಿ ಕಾಯ್ದೆ ಮತ್ತು ಆರ್‌ಬಿಐ ನಿಯಮದ ನಡುವೆ ತುಂಬ ವ್ಯತ್ಯಾಸ  ಇದ್ದು ಇವುಗಳನ್ನು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿ ಸರಿಪಡಿಸಬೇಕಾಗಿದೆ ಎಂದರು.

ಸಹಕಾರಿ ಕ್ಷೇತ್ರ ಅತ್ಯಂತ ಪವಿತ್ರ:

ಸಹಕಾರಿ ಕ್ಷೇತ್ರ ಹಾಗೂ ವಾಣಿಜ್ಯ ಬ್ಯಾಂಕ್‌ಗಳಿಗೆ ಬಹಳ ವ್ಯತ್ಯಾಸ ಇದೆ. ಸಹಕಾರ ಕ್ಷೇತ್ರ ಅತ್ಯಂತ ಪವಿತ್ರವಾಗಿದ್ದು, ಗ್ರಾಹಕರಿಂದ ಶೇರು, ಠೇವಣಾತಿ ಪಡೆದು ಕಷ್ಟಪಟ್ಟು ಬೆಳೆಸಿ ಲಾಭ ಪಡೆಯಲಾಗುತ್ತದೆ. ಆದರೆ ವಾಣಿಜ್ಯ ಬ್ಯಾಂಕ್‌ಗಳು ಸರ್ಕಾರಿ ಹಣವನ್ನು ಠೇವಣಿಯಾಗಿರಿಸಿ ನಿಬಡ್ಡಿ ಪಡೆದು ವ್ಯವಹರಿಸುತ್ತಾರೆ. ಹೀಗಾಗಿಯೇ ಮಲ್ಯ, ನೀರವ್ ಮುಂತಾದವರಿಗೆ ಸಾಲ ನೀಡಿ ಅತ್ತ ಸಾಲವೂ ವಸೂಲಿ ಇಲ್ಲದೆ, ಬಡ್ಡಿಯೂ ಕೈಗೆ ಸಿಗದ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ಸಾಲದ ಅಗತ್ಯತೆ ನಿಜವಾಗಿ  ಇರುವವರಿಗೆ ನಾವು ನೆರವಾಗುತ್ತಿದ್ದು, ವಾಣಿಜ್ಯ ಬ್ಯಾಂಕ್‌ಗಳು ವಿಲೀನವಾಗುತ್ತಿದ್ದರೆ, ಸಹಕಾರಿ ಕ್ಷೇತ್ರ ವಿಕಸನದ ಹಾದಿಯಲ್ಲಿದೆ ಎಂದರು.

ಎಸ್‌ಸಿಡಿಸಿ ಕಾರ್ಯವೈಖರಿಗೆ ಕೇಂದ್ರ ಮೆಚ್ಚುಗೆ:

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿವೆ. ಇಲ್ಲಿನ  ಎಸ್‌ಸಿಡಿಸಿಸಿ ಬ್ಯಾಂಕ್‌ನ ಕಾರ್ಯವೈಖರಿಯನ್ನು ಮೆಚ್ಚಿಕೊಂಡ ಕೇಂದ್ರ, ಸಹಕಾರಿ ಕ್ಷೇತ್ರದ ಸುಧಾರಣೆಗೆ ಇಲ್ಲಿ ಕೈಗೊಂಡ ಕ್ರಮಗಳ ಮಾಹಿತಿಯನ್ನು ತರಿಸಿಕೊಂಡು ಇದೇ  ಮಾದರಿಯನ್ನು ಎಲ್ಲ ಕಡೆಗಳಲ್ಲಿ ಕಾರ್ಯರೂಪಕ್ಕೆ ತರುವ ಉದ್ದೇಶ ಹೊಂದಿರುವುದು ಅಭಿಮಾನದ ಸಂಗತಿ ಎಂದರು. 

ದ.ಕ. ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಎಚ್.ಎನ್.ರಮೇಶ್ ಮಾತನಾಡಿ, ಸಾಲದ ಮೇಲಿನ ಡಿಕ್ರಿಗಳ ಸಂದರ್ಭ ಸೊತ್ತುಗಳ ಹರಾಜು ವೇಳೆ ಎದುರುದಾರರು  ಪ್ರಬಲರಾಗಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಏಲಂ ಕೂಗಿದರೂ ಅದನ್ನು ಖರೀದಿಸುವವರು ಮುಂದೆ ಬರುವುದಿಲ್ಲ. ಇದಕ್ಕಾಗಿ ಅಂತಹ ಜಾಗಗಳ ಅಳತೆ, ನಕ್ಷೆ,  ಪಾದಚಾರಿ ಮಾರ್ಗಗಳು ಸರಿಯಾಗಿ ಇವೆಯೇ ಎಂಬುದನ್ನು ಪರಿಶೀಲಿಸಬೇಕು. ದಾಖಲೆ ಪತ್ರಗಳು, ಕರಾರು ಪತ್ರಗಳು ಸರಿ ಇಲ್ಲದಿದ್ದರೆ ಸೊತ್ತುಗಳ ಹರಾಜು ಬಳಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಆಡಳಿತ ಕಾರ್ಯದಕ್ಷತೆ ಇದ್ದರೆ ಹೇಗೆ ಬೆಳವಣಿಗೆ ಹೊಂದಬಹುದು ಎಂಬುದಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ. ಎನ್.ರಾಜೇಂದ್ರ ಕುಮಾರ್ ಅವರೇ ಸಾಕ್ಷಿ. ಸಹಕಾರ ಸಂಘಗಳು ಲಾಭ ಗಳಿಸುವ ಜೊತೆಗೆ ಸಮಾಜ ಅಭಿವೃದಿ ಯಲ್ಲಿ ತೊಡಗಿಸಿಕೊಳ್ಳುವುದು ಶ್ರೇಯಸ್ಕರ ಎಂದರು.

ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ವತಿಯಿಂದ ವಿಷನರಿ ಲೀಡರ್‌ಶಿಪ್ ಅವಾರ್ಡ್ ಪಡೆದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಈ ಸಂದರ್ಭ ಸನ್ಮಾ ನಿಸಿ ಗೌರವಿಸಲಾಯಿತು.

ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಬೆಂಗಳೂರು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಬಿ.ಕೆ.ಸಲೀಂ, ಎಸ್‌ಸಿಡಿಸಿಸಿ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ತ್ರಿವೇಣಿ ರಾವ್, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಸಂಜೀವ  ಪೂಜಾರಿ ಇದ್ದರು. 

ದಕ್ಷಿಣ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಹರೀಶ್ ಆಚಾರ್ಯ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸುಗಂಧಿ ಪ್ರಾರ್ಥಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ವಿ.ಹಿರೇಮಠ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article