ಶ್ವಾಸನಾಳದಲ್ಲಿ ಕಡಲೇಬೀಜ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಹಸುಗೂಸು ರಕ್ಷಣೆ
ಮಗು ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕಡಲೇಬೀಜವನ್ನು ಸೇವಿಸಿದೆ. ಆರಂಭದಲ್ಲಿ ಕೆಮ್ಮು ಕಾಣಿಸಿಕೊಂಡರೂ, ನಂತರ ಮಗು ಸುಮ್ಮನಾದ ಕಾರಣ ಪೋಷಕರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಕೆಲ ಸಮಯದ ಬಳಿಕ ಮಗುವಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡು ನಿತ್ರಾಣಗೊಂಡಿದೆ. ಕೂಡಲೇ ಪೋಷಕರು ಮಗುವನ್ನು ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಅಲ್ಲಿ ಪ್ರಾಥಮಿಕ ತಪಾಸಣೆ ನಡೆಸಿದಾಗ ಶ್ವಾಸನಾಳದಲ್ಲಿ ಏನೋ ಸಿಲುಕಿರುವ ಶಂಕೆ ವ್ಯಕ್ತವಾಯಿತು. ಕೂಡಲೇ ಅಲ್ಲಿಂದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕರೆತರಲಾಯಿತು. ಡಾ. ಸ್ವಾತಿ ರಾವ್ ತಪಾಸಣೆಯಲ್ಲಿ ಮಗುವಿನ ಸ್ಥಿತಿ ಗಂಭೀರವಾಗಿರುವುದನ್ನು ಪತ್ತೆಹಚ್ಚಿದ್ದಾರೆ. ಅದಾಗಲೇ ಮಗುವಿನ ಆಕ್ಸಿಜನ್ ಸ್ಯಾಚುರೇಶನ್ ೮೮ ಕ್ಕೆ ಕುಸಿದಿತ್ತು. ಸಿಟಿ ಸ್ಕ್ಯಾನ್‌ನಲ್ಲಿ ಮಗುವಿನ ಬಲ ಶ್ವಾಸನಾಳದಲ್ಲಿ ಚಿಕ್ಕದೊಂದು ವಸ್ತು ಸಿಲುಕಿರುವುದು ಪತ್ತೆಯಾಗಿದೆ.
ಶ್ವಾಸನಾಳದಲ್ಲಿ ಕಡಲೇಬೀಜದ ತುಣುಕು ಸಿಲುಕಿರುವ ಕಾರಣ ಬಲ ಶ್ವಾಸಕೋಶದಲ್ಲಿ ಉಬ್ಬರ ಮತ್ತು ಎಡ ಶ್ವಾಸಕೋಶ ಮತ್ತು ಹೃದಯದ ಸಂಕೋಚನ ಕಂಡುಬಂದಿದೆ. ಮಗುವನ್ನು ತಕ್ಷಣ ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಗಿದ್ದು ಡಾ. ಗೌತಮ್ ಕುಲಮರ್ವಾ ತುರ್ತು ಬ್ರೊಂಕೊಸ್ಕೊಪಿಕ್ ವಿಧಾನ ಕೈಗೊಳ್ಳುವ ಮೂಲಕ ಕಡಲೆಬೀಜದ ತುಣುಕನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.