ಸರಕಾರ ನೀಡುವ ಸವಲತ್ತುಗಳು ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ತಲುಪಿಸಲು ಕ್ರಮ ಕೈಗೊಳ್ಳಿ: ಪಲ್ಲವಿ ಜಿ.
ಸುಳ್ಯ ತಾಲೂಕಿಗೆ ಭೇಟಿ ನೀಡಿದ ಅವರು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪಂಬದ, ಮೈಲ, ಬಾಕುಡ, ನಲಿಕೆ, ನಲ್ಕದಾಯ, ಅಜಿಲ, ಭೈರ, ಚೆನ್ನದಾಸರ್, ಮಲೆಕುಡಿಯ, ಪರವನ್, ಕೊರಗ ಹಾಗೂ ಇತರ ಅಲೆಮಾರಿ ಸಮುದಾಯಗಳ ಕುಂದುಕೊರತೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಸರಕಾರ ಅನುದಾನವನ್ನು ನೀಡಿದೆ. ಸರಕಾರದ ಯೋಜನೆಗಳು ಜನರಿಗೆ ತಲುಪುತಿದೆಯಾ, ಫಲಾನುಭವಿಗಳ ಆಯ್ಕೆ ಸರಿಯಾಗಿ ನಡೆಯುತಿದೆಯಾ ಎಂಬುದರ ಬಗ್ಗೆ ಪ್ರತಿ ಜಿಲ್ಲೆಯ ತಾಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತಿದೆ ಎಂದು ಅವರು ಹೇಳಿದರು.
ಸುಳ್ಯ ತಾಲೂಕಿನ ಬಾಳುಗೋಡಿನಲ್ಲಿ ಮಲೆಕುಡಿಯ ವಿಭಾಗದ ಕುಟುಂಬಗಳಿಗೆ ನಿವೇಶನ ಒದಗಿಸುವ ಕುರಿತು ಬೇಡಿಕೆ ಸಲ್ಲಿಸಲಾಯಿತು. ಈ ಭಾಗದಲ್ಲಿಯೇ ರಸ್ತೆ ಅಭಿವೃದ್ಧಿ ಆಗಿಲ್ಲ, ರಸ್ತೆ ಅಭಿವೃದ್ಧಿಗೆ ಅನುದಾನ ಇದ್ದರೂ ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ ದೊರೆಯದ ಕಾರಣ ಕಾಮಗಾರಿ ನಡೆಸಲಾಗುತ್ತಿಲ್ಲ ಎಂದು ಅಧ್ಯಕ್ಷರ ಗಮನಕ್ಕೆ ತರಲಾಯಿತು.
ಅರಣ್ಯ ಕಾನೂನಿನ್ವಯ ಸೂಕ್ತ ದಾಖಲೆಗಳೊಂದಿಗೆ ಆನ್ ಲೈನ್ ಅರ್ಜಿ ಸಲ್ಲಿಸಿದಲ್ಲಿ ರಸ್ತೆ ಅಭಿವೃದ್ಧಿಗೆ ಸ್ಥಳ ನೀಡುವ ಅವಕಾಶ ಇದೆ ಎಂದು ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಮಾಹಿತಿ ನೀಡಿದರು. ಅದರಂತೆ ಕ್ರಮ ಕೈಗೊಳ್ಳಲು ಅಧ್ಯಕರು ಜಿ.ಪಂ.ಇಂಜಿನಿಯರ್‌ಗಳಿಗೆ ಸೂಚಿಸಿದರು.
ಡೀಮ್ಡ್ ಫಾರೆಸ್ಟ್‌ನಲ್ಲಿ ನಿವೇಶನ ನೀಡಬೇಕು, ಪ.ಜಾತಿ, ಪ.ಪಂ.ಹಾಗೂ ಇತರ ಸಮುದಾಯದವರು ಆರಾಧಿಸುವ ದೈವಸ್ಥಾನಗಳಿಗೆ ಜಾಗ ಒದಗಿಸಬೇಕು, ರಸ್ತೆ, ಕುಡಿಯುವ ನೀರು, ವಿದ್ಯುತ್, ನಿವೇಶನ ಮತ್ತಿತರ ಮೂಲಭೂತ, ಅವಸ್ಯಕತೆಗಳನ್ನು ಒದಗಿಸಬೇಕು ಎಂದು ನಂದರಾಜ ಸಂಕೇಶ, ಪುಟ್ಟಣ್ಣ, ಚಂದ್ರಶೇಖರ ಪಲ್ಲತ್ತಡ್ಲ, ಚೇತನ್ ಕಜೆಗದ್ದೆ, ಧರ್ಮಪಾಲ ಕೊಯಿಂಗಾಜೆ, ಶಶಿಧರ ಎಂ.ಜೆ ಮತ್ತಿತರರು ಬೇಡಿಕೆ ಇರಿಸಿದರು.
ಎಲ್ಲಾ ಬೇಡಿಕೆಗಳ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ಪಲ್ಲವಿ ಅವರು ಭರವಸೆ ನೀಡುದರು. ವಿವಿಧ ಇಲಾಖೆಗಳಲ್ಲಿ ಅಧಿಕಾರಿ, ಸಿಬ್ಬಂದಿ, ಇಂಜಿನಿಯರ್‌ಗಳ ಕೊರತೆ ಇರುವ ಬಗ್ಗೆ ಅಧಿಕಾರಿಗಳು ಅಧ್ಯಕ್ಷರ ಗಮನಕ್ಕೆ ತಂದರು.
ಸುಳ್ಯದ ಅಂಬೇಡ್ಕರ್ ಭವನ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವ ಬಗ್ಗೆ ಚರ್ಚೆ ನಡೆಯಿತು. ಸಚಿವರ ಹಾಗು ಸರಕಾರದ ಗಮನಕ್ಕೆ ತಂದು ಅಂಬೇಡ್ಕರ್ ಭವನವನ್ನು ಪೂರ್ತಿ ಮಾಡುವುದಾಗಿ ತಿಳಿಸಿದರು. ಜ.8 ರಂದು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು. ಅಂದು ಸಂಪೂರ್ಣ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
2017ರಲ್ಲಿ ಸುಳ್ಯ ತಾಲೂಕಿನ ಪೆರುವಾಜೆ, ಅಜ್ಜಾವರ, ಉಬರಡ್ಕ ಮಿತ್ತೂರು, ನೆಲ್ಲೂರು ಕೆಮ್ರಾಜೆ ಮತ್ತಿತರ ಕಡೆ ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದಾಗಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಆದರೆ ಎಲ್ಲಿಯೂ ಅಂಬೇಡ್ಕರ್ ಭವನ ನಿರ್ಮಾಣ ಆಗಿಲ್ಲ. ಶಂಕುಸ್ಥಾಪನೆಯ ಫಲಕಗಳು ಮಾತ್ರ ಇದೆ ಎಂದು ಸಭೆಯಲ್ಲಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ನಂದರಾಜ ಸಂಕೇಶ್ ಮತ್ತಿತರರು ಅಧ್ಯಕ್ಷರ ಗಮನಕ್ಕೆ ತಂದರು. ಈ ಬಗ್ಗೆ ಚರ್ಚೆ ನಡೆದು ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅಧ್ಯಕ್ಷೆ ಪಲ್ಲವಿ ಅವರು ತಹಶೀಲ್ದಾರ್, ಇಓ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ಸಭೆಯಲ್ಲಿ ವಿಮುಕ್ತ ಬುಡಕಟ್ಟು ಒಕ್ಕೂಟದ ರಾಜ್ಯ ಜಂಟಿ ಕಾರ್ಯದರ್ಶಿ ಆನಂದ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ತಹಶೀಲ್ದಾರ್ ಎಂ.ಮಂಜುಳ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣ ಬಿ., ಕರ್ನಾಟಕ ಪ.ಜಾ, ಪ.ಪಂ. ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಸಮಿತಿ ಸದಸ್ಯ ಮಹೇಶ್ ಬೆಳ್ಳಾರ್ಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.