ವೈದ್ಯರಿಗೆ ವೇತನ ಬಾಕಿಯಾಗಲು ಕೇಂದ್ರ ಸರ್ಕಾರವೇ ಕಾರಣ: ಪದ್ಮರಾಜ್ ಆರ್. ಪೂಜಾರಿ
ಮಂಗಳೂರು: ದ.ಕ. ಜಿಲ್ಲೆಯ ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತರಿಗೆ ವೇತನ ಬಾಕಿ ಇದೆ ಎಂದು ಬೊಗಳೇ ಬಿಡುವ ದ.ಕ. ಬಿಜೆಪಿಯವರೇ ಹಾಗೂ ಜಿಲ್ಲೆಯ ಶಾಸಕರೇ ವೇತನ ಬಾಕಿಯಾಗಲು ಕೇಂದ್ರ ಸರ್ಕಾರದ ನೀತಿಯೇ ಹೊರತು ರಾಜ್ಯ ಸರ್ಕಾರದ ವಿಳಂಬದಿಂದ ಅಲ್ಲ ಎನ್ನುವುದನ್ನು ಮೊದಲು ತಿಳಿಯಲಿ ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಕರ್ನಾಟಕದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಪ್ಪಂದಾಧಾರಿತ ನೌಕರರು ಹಾಗೂ ಆಶಾ ಕಾರ್ಯಕರ್ತರಿಗೆ 2025ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ವೇತನ ಮತ್ತು ಪ್ರೋತ್ಸಾಹಧನ ಪಾವತಿಯಲ್ಲಿ ಸಂಭವಿಸಿದ ವಿಳಂಬಕ್ಕೆ ಕೇಂದ್ರ ಸರ್ಕಾರದ ನೀತಿಯೇ ಕಾರಣ.
ಭಾರತ ಸರ್ಕಾರದ ಮಾರ್ಗಸೂಚಿಗಳಂತೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯನ್ನು ಆರ್ಥಿಕ ವರ್ಷದ ಮಧ್ಯಭಾಗದಲ್ಲಿ SNA-SPARSH ಎಂಬ ಹೊಸ ಹಣಕಾಸು ವ್ಯವಸ್ಥೆಗೆ ವರ್ಗಾಯಿಸಲಾಗಿದೆ. ಹಿಂದಿನ ವ್ಯವಸ್ಥೆಯಿಂದ ಹೊಸ ವ್ಯವಸ್ಥೆಗೆ ವರ್ಗಾವಣೆಯಾಗುವ ಸಂದರ್ಭ ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ನಿಧಿ ಬಿಡುಗಡೆ ಹಾಗೂ ಪಾವತಿ ಪ್ರಕ್ರಿಯೆಗಳಲ್ಲಿ ತಾಂತ್ರಿಕ ಮತ್ತು ಪ್ರಕ್ರಿಯಾತ್ಮಕ ಬದಲಾವಣೆಗಳು ಅಗತ್ಯವಾಗಿದ್ದು, ಇದರಿಂದಾಗಿ ಕೆಲವು ತಾತ್ಕಾಲಿಕ ವಿಳಂಬಗಳಾಗಿವೆ.
SNA-SPARSH ವ್ಯವಸ್ಥೆಡಿ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾದ ನಂತರ ಮಾತ್ರ ರಾಜ್ಯ ಸರ್ಕಾರ ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಪಾಲಿನ ನಿಧಿಗಳ ಸ್ವೀಕೃತಿಯಲ್ಲಿ ಉಂಟಾದ ವಿಳಂಬ ಮತ್ತು ಹೊಸ ವ್ಯವಸ್ಥೆಗೆ ಹೊಂದಾಣಿಕೆಯ ಪ್ರಕ್ರಿಯೆಗಳ ಕಾರಣದಿಂದಾಗಿ NHM ನೌಕರರಿಗೆ ವೇತನ ಪಾವತಿ ನಿರ್ಧಿಷ್ಟ ಸಮಯಕ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಜ.8 ರಂದು ಅನುದಾನ ಬಿಡುಗಡೆ ಮಾಡಿದ್ದು, ಸಂಬಂಧಿತ ಕೇಂದ್ರ ಹಾಗೂ ರಾಜ್ಯ ಪಾಲಿನ ನಿಧಿಗಳು ಪ್ರಸ್ತುತ ರಾಜ್ಯ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆಯಲ್ಲಿದೆ. NHM ನೌಕರರ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ದಿನಗಳಿಂದ ಕೇಂದ್ರ ಅನುದಾನಗಳ ಸಮಯವನ್ನು ಪರಿಗಣಿಸದೆ, ವೇತನ ಪಾವತಿಯನ್ನು ಆದ್ಯತೆಯ ಮೇರೆಗೆ ಶೀಘ್ರವಾಗಿ ಬಿಡುಗಡೆಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಂದಿನ ದಿನಗಳಲ್ಲಿ ಯಾವುದೇ ವಿಳಂಬವಾಗದಂತೆ ಹಣಕಾಸು ಪ್ರಕ್ರಿಯೆಯನ್ನು ಸರಳಗೊಳಿಸಿ ನಿಧಿಗಳ ಸುಗಮ ಹರಿವು ಖಚಿತಪಡಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಯಿಂದ ವೇತನ ಬಾಕಿ ಇದೆ ಎನ್ನುವುದನ್ನು ಮೊದಲು ತಿಳಿದುಕೊಂಡು ಮತ್ತೆ ನಿಮ್ಮ ಪ್ರತಿಕ್ರಿಯೆ ಕೊಡಲಿ. ಕಾಂಗ್ರೆಸ್ ಎಂದಿಗೂ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡೋದಿಲ್ಲ. ಈಗ ತಿಳಿಸಲಿ ಗೊಂದಲ ಸೃಷ್ಟಿ ಮಾಡುವವರು ಯಾರು ಎಂದು ಪದ್ಮರಾಜ್ ಆರ್. ಪೂಜಾರಿ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.