ರಾಷ್ಟ್ರಧ್ವಜಕ್ಕೆ ಆಗುವ ಅಪಮಾನ ತಡೆಯಲು ಹಿಂದೂ ಜನಜಾಗೃತಿ ಸಮಿತಿ ಮನವಿ
ಜಿಲ್ಲಾಧಿಕಾರಿಗಳ ಕಚೇರಿಯ ಆಡಳಿತ ಅಧೀಕ್ಷಕ ಜಾಕ್ಲಿನ್ ಅವರ ಮೂಲಕ ಈ ಮನವಿಯನ್ನು ಹಸ್ತಾಂತರಿಸಲಾಯಿತು.
ಪ್ಲಾಸ್ಟಿಕ್ ರಾಷ್ಟ್ರಧ್ವಜದಿಂದ ಆಗುವ ಅವಮಾನವನ್ನು ನಿಲ್ಲಿಸುವಂತೆ ಮುಂಬೈ ಹೈಕೋರ್ಟ್ ಈಗಾಗಲೇ ಸರ್ಕಾರಕ್ಕೆ ಆದೇಶ ನೀಡಿದ್ದು, ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಗೃಹ ಹಾಗೂ ಶಿಕ್ಷಣ ಇಲಾಖೆಗಳು ಈಗಾಗಲೇ ಸುತ್ತೋಲೆಗಳನ್ನು ಹೊರಡಿಸಿವೆ. ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುವುದು ‘ಲಾಂಛನಗಳು ಮತ್ತು ಹೆಸರುಗಳ (ಅನುಚಿತ ಬಳಕೆ ತಡೆ) ಕಾಯಿದೆ 1950’ ಮತ್ತು ‘ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯ್ದೆ 1971’ರ ಅಡಿಯಲ್ಲಿ ಕಾನೂನುಬದ್ಧ ಅಪರಾಧವಾಗಿದೆ.
ಹಿಂದೂ ಜನಜಾಗೃತಿ ಸಮಿತಿಯು ಕಳೆದ ಅನೇಕ ವರ್ಷಗಳಿಂದ ಶಾಲಾ-ಕಾಲೇಜುಗಳಲ್ಲಿ ಉಪನ್ಯಾಸ, ಕರಪತ್ರ ವಿತರಣೆ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ರಾಷ್ಟ್ರಧ್ವಜದ ಗೌರವ ಕಾಪಾಡುವ ಕುರಿತು ನಿರಂತರ ಜನಜಾಗೃತಿ ಮೂಡಿಸುತ್ತಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದನ್ನು ತಡೆಯಲು ‘ರಾಷ್ಟ್ರ ಧ್ವಜ ಗೌರವ ಕೃತಿ ಸಮಿತಿ’ಯನ್ನು ಕೂಡಲೇ ಸ್ಥಾಪಿಸಬೇಕು, ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ತಯಾರಿಸಿ ಮಾರಾಟ ಮಾಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಎಲ್ಲಾ ಶಾಲೆಗಳಲ್ಲಿ ‘ರಾಷ್ಟ್ರಧ್ವಜವನ್ನು ಗೌರವಿಸಿ’ ಎಂಬ ಉಪಕ್ರಮವನ್ನು ನಡೆಸಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ಸಮಿತಿಯು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಉಪೇಂದ್ರ ಆಚಾರ್ಯ, ಸುಧಾಕರ್, ನ್ಯಾಯವಾದಿಗಳಾದ ತೀರ್ಥೇಶ್ ಬಲ್ಯ, ಹಿಂದೂ ಸೇವಾ ಸಮಿತಿಯ ಯೋಗೀಶ್ ರೈ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ದಿನಕರ್ ಪೂಜಾರಿ, ಹಿಂದುತ್ವವಾದಿಗಳಾದ ಚಂದ್ರಕಾಂತ್ ಕಾಮತ್, ಹರೀಶ್, ರಾಜೇಂದ್ರ ಪೇಜಾವರ, ಲಕ್ಷ್ಮೀಕಾಂತ್, ಭಾಸ್ಕರ್ ಆಚಾರ್ಯ ಉಪಸ್ಥಿತರಿದ್ದರು.