ಶಾಸಕಿ ಸಹೋದರಿ ಭಾಗೀರಥಿ ಮುರುಳ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಮಾನಕಾರಿ ಬರಹ: ಶಾಸಕ ಕಾಮತ್ ಆಕ್ರೋಶ
Wednesday, January 7, 2026
ಮಂಗಳೂರು: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಸಹೋದರಿ ಭಾಗೀರಥಿ ಮುರುಳ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ದುಷ್ಟನೋರ್ವ ಅವಮಾನಕಾರಿ ಬರಹದ ಮೂಲಕ ವಿಕೃತಿ ಮೆರೆದಿರುವುದು ಖಂಡನೀಯವಾಗಿದ್ದು ಈ ಕೂಡಲೇ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯ ಹೆಡೆಮುರಿ ಕಟ್ಟಬೇಕೆಂದು ಶಾಸಕ ವೇದವ್ಯಾಸ ಕಾಮತ್ ಅವರು ಆಗ್ರಹಿಸಿದರು.
ಅಸಭ್ಯ ಭಾಷೆಗಳ ಮೂಲಕ ಬೆದರಿಕೆ ಹಾಕುವ ಇಂತಹ ದುರುಳರು ನಾಗರೀಕ ಸಮಾಜಕ್ಕೆ ಬಹುದೊಡ್ಡ ಕಳಂಕ. ಇದು ಕೇವಲ ಒಬ್ಬ ದಲಿತ ಸಮುದಾಯದ ಸಹೋದರಿಗೆ ಮಾಡಿದ ಅವಮಾನವಲ್ಲ, ಬದಲಿಗೆ ಈ ದೇಶದ ಮಹಿಳೆಯೊಬ್ಬರ ಘನತೆ ಹಾಗೂ ಗೌರವದ ಮೇಲಿನ ನೇರ ದಾಳಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ ಶಾಸಕರು ಸೇರಿದಂತೆ ಬಿಜೆಪಿ ಕಾರ್ಯಕರ್ತರ, ದಲಿತರ, ಹಿಂದುಳಿದವರ ಮೇಲೆ ಹಲ್ಲೆ ಯತ್ನ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಸಾಮಾನ್ಯವಾಗಿ ಬಿಟ್ಟಿದೆ ಎಂದರು.
ಸಣ್ಣಪುಟ್ಟ ಕಾರಣಗಳಿಗೆ ವಿರೋಧ ಪಕ್ಷಗಳ ಸಹಿತ ಜನಸಾಮಾನ್ಯರ ಮೇಲೆ ಸುಳ್ಳು ಆರೋಪ ಹೊರಿಸಿ ಕೇಸ್ ದಾಖಲಿಸುವ ರಾಜ್ಯ ಕಾಂಗ್ರೆಸ್ ಸರ್ಕಾರ ಈಗೇನು ಮಾಡುತ್ತಿದೆ? ಇಂತಹ ಅನಾಗರಿಕ ವರ್ತನೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದರು.