ಪೆಟ್ರಿಕ್‌ಗೆ ಕೊಂಕಣಿ ಲೇಖಕ್ ಸಂಘದ ಪ್ರಶಸ್ತಿ
ಪ್ರಶಸ್ತಿ 25,000 ರೂ. ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಫೆ. 7ರಂದು ಸಂಜೆ 6.30ಕ್ಕೆ ನಗರದ ನಂತೂರು ಬಳಿಯ ಸಂದೇಶ ಪ್ರತಿಷ್ಠಾನದಲ್ಲಿ ಜರಗಲಿರುವುದು. ಕೊಂಕಣಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಲೇಖಕರಿಗೆ 2022ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಂಚಾಲಕ ರಿಚರ್ಡ್ ಮೊರಾಸ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪೆಟ್ರಿಕ್ ಕಾಮಿಲ್ ಮೊರಾಸ್ ಅವರು ಕೊಂಕಣಿ ಸಾಹಿತ್ಯ ಲೋಕದಲ್ಲಿ ಎಂ. ಪೆಟ್ರಿಕ್ ಎಂದೇ ಖ್ಯಾತರು. ಹದಿನೆಂಟನೇ ವಯಸ್ಸಿನಲ್ಲಿ ಪುಸ್ತಕ ಮಾರಾಟಗಾರರಾಗಿ ಮತ್ತು ‘ಕಾಣಿಕ್’ ಪತ್ರಿಕೆಯ ಸಹ-ಸಂಪಾದಕರಾಗಿ ವೃತ್ತಿಜೀವನ ಆರಂಭಿಸಿದ ಇವರು, ಮುಂದೆ 800ಕ್ಕೂ ಹೆಚ್ಚು ಸಣ್ಣ ಕಥೆಗಳು, 400ಕ್ಕೂ ಹೆಚ್ಚು ಲೇಖನಗಳು ಹಾಗೂ ಹತ್ತು ಕಾದಂಬರಿಗಳನ್ನು ರಚಿಸಿದ ಬಹುಮುಖ ಸಾಹಿತಿಯಾದರು. ತಮ್ಮದೇ ಆದ ‘ನಿತ್ಯಾಧರ್ ಪ್ರಕಾಶನ’ದ ಮೂಲಕ ನಾಟಕಗಳು ಮತ್ತು ಪತ್ತೇದಾರಿ ಕಥೆಗಳು ಸೇರಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿ, ಕೊಂಕಣಿ ಭಾಷೆಯ ಸೇವಕರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.
ಸಮಿತಿ ಸದಸ್ಯ ಡೊಲಿ ಎಫ್. ಲೋಬೊ, ಸಲಹಾ ಸಮಿತಿ ಸದಸ್ಯರಾದ ಡಾ. ಜೆರಿ ನಿಡ್ಡೋಡಿ, ಜೆ..ಎಫ್. ಡಿಸೋಜ ಉಪಸ್ಥಿತರಿದ್ದರು.