ಜವನೆರ್ ಬೆದ್ರದ ಸ್ಥಾಪಕ ಅಮರ್ ಕೋಟೆಗೆ ಗೋಲ್ಡನ್ ಐಕಾನಿಕ್ ಅವಾರ್ಡ್
Tuesday, January 27, 2026
ಮೂಡುಬಿದಿರೆ: ಅಮೇರಿಕನ್ ವಿಸ್ಡಮ್ ಪೀಸ್ ಎಜುಕೇಶನ್ ಅಕಾಡೆಮಿಯ ವತಿಯಿಂದ ನೀಡಲಾಗುವ ಗೋಲ್ಡನ್ ಐಕಾನಿಕ್ ಅವಾರ್ಡ್–2026ರ ಅಡಿಯಲ್ಲಿ, ಜವನೆರ್ ಬೆದ್ರ ಸಂಘಟನೆಯ ಸ್ಥಾಪಕ ಅಮರ್ ಕೋಟೆ ಅವರಿಗೆ ರಾಷ್ಟ್ರೀಯ ಸಮಾಜ ಸೇವಾ ಪ್ರಶಸ್ತಿ ಗೌರವ ಲಭಿಸಿದೆ.
ಸಮಾಜ ಸೇವೆಯ ಕ್ಷೇತ್ರದಲ್ಲಿ ಸಲ್ಲಿಸಿರುವ ನಿರಂತರ ಸೇವೆ, ಅಸಾಧಾರಣ ಕೊಡುಗೆ, ಸಮರ್ಪಣಾಭಾವ ಹಾಗೂ ಮಾನವೀಯ ಕಾರ್ಯಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ. “ಸಮಾಜ ಸೇವೆಯ ಉದಯೋನ್ಮುಖ ತಾರೆ ಎಂಬ ವಿಶೇಷ ಗೌರವವೂ ಅವರಿಗೆ ಲಭಿಸಿದೆ.
ಅಮೇರಿಕನ್ ವಿಸ್ಡಮ್ ಪೀಸ್ ಎಜುಕೇಶನ್ ಅಕಾಡೆಮಿ ಸಂಸ್ಥೆ ಅಂತರಾಷ್ಟ್ರೀಯ ಮಾನ್ಯತೆ ಸಂಸ್ಥೆ ಗುಣಮಟ್ಟ ನಿರ್ವಹಣಾ ವ್ಯವಸ್ಥೆಯ ಪ್ರಮಾಣೀಕರಣ ಪಡೆದ ಸಂಸ್ಥೆಯಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಜ.25, 2026ರಂದು ಪುದುಚೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಮರ್ ಕೋಟೆ ಪರವಾಗಿ ಅವರ ಪ್ರತಿನಿಧಿ ಪ್ರಶಸ್ತಿ ಸ್ವೀಕರಿಸಿದರು. ಅವರ ಸೇವಾ ಸಾಧನೆಯನ್ನು ಪ್ರಶಂಸಿಸಿ, ಮುಂದಿನ ದಿನಗಳಲ್ಲಿಯೂ ಸಮಾಜಮುಖಿ ಕಾರ್ಯಗಳು ಇನ್ನಷ್ಟು ವಿಸ್ತಾರಗೊಳ್ಳಲಿ ಎಂದು ಆಶಿಸಲಾಯಿತು.