ಧರಣಿ ನಿರತರ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ: ದಲಿತ್ ಸೇವಾ ಸಮಿತಿ ಆಕ್ರೋಶ

ಧರಣಿ ನಿರತರ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ: ದಲಿತ್ ಸೇವಾ ಸಮಿತಿ ಆಕ್ರೋಶ


ಪುತ್ತೂರು: ಕಳೆದ 4 ದಿನಗಳಿಂದ ಪುತ್ತೂರು ತಾಲೂಕು ಆಡಳಿತ ಸೌಧದ ಮುಂದೆ ವೃದ್ಧ ದಂಪತಿಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಕನಿಷ್ಟ ಮಾನವೀಯ ದೃಷ್ಟಿಯಿಂದ ಈ ದಂಪತಿಗಳ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ನಡೆಯಬೇಕಾಗಿದೆ. ಮೈ ಕೊರೆಯುವ ಚಳಿಯಲ್ಲಿ ಈ ದಂಪತಿಗಳು ಧರಣಿ ನಡೆಸುತ್ತಿದ್ದರೂ ಅಧಿಕಾರಿ ವರ್ಗ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ವ್ಯಕ್ತ ಪಡಿಸುತ್ತಿರುವುದು ಖಂಡನೀಯ ವಿಚಾರವಾಗಿದೆ. 

ಶ್ರೀಮಂತರು ಎಕರೆಗಟ್ಟಲೆ ಸ್ಥಳವನ್ನು ಒತ್ತುವರಿ ಮಾಡಿಕೊಂಡಿದ್ದರೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಕೇವಲ 20 ಸೆಂಟ್ಸ್ ಸ್ಥಳವನ್ನು ಒತ್ತುವರಿ ಮಾಡಿ ಮನೆ ಕಟ್ಟಿರುವುದನ್ನು ನೆಲಸಮ ಮಾಡಿದ್ದಾರೆ. ಅದನ್ನೆಲ್ಲಾ ಪಕ್ಕಕ್ಕಿಟ್ಟು ಪ್ರಸ್ತುತ ವೃದ್ಧ ದಂಪತಿಗಳ ಆರೋಗ್ಯದ ಹಿನ್ನಲೆಯಲ್ಲಿ ಈ ಸಮಸ್ಯೆಗೆ ತಕ್ಷಣ ಪರಿಹಾರ ನೀಡಬೇಕು ಎಂದು ದಲಿತ್ ಸೇವಾಸಮಿತಿ ಜಿಲ್ಲಾ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕ್ಕಾಡು ಹೇಳಿದರು.

ಗುರುವಾರ ಧರಣಿ ನಿರತ ವೃದ್ಧ ದಂಪತಿಗಳಾದ ಕೌಕ್ರಾಡಿಯ ಕಾಪಿನಬಾಗಿಲು ನಿವಾಸಿ ರಾಧಮ್ಮ ಹಾಗೂ ಮುತ್ತುಸ್ವಾಮಿ ಅವರನ್ನು ಭೇಟಿಯಾದ ಅವರು ದಕ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ವೃದ್ಧ ದಂಪತಿಗಳ ಧರಣಿ ಅತ್ಯಂತ ನೋವು ತರುವ ವಿಚಾರವಾಗಿದೆ. ಸರ್ಕಾರಕ್ಕೆ ಈ ದಂಪತಿಗಳಿಗೆ 20 ಸೆಂಟ್ಸ್ ಸ್ಥಳ ಕೊಡುವುದು ದೊಡ್ಡ ವಿಷಯವಲ್ಲ. ಹಾಗಿದ್ದರೂ ಯಾಕೆ ಕೊಡುತ್ತಿಲ್ಲ ಎನ್ನುವುದು ನಿಗೂಢ ಪ್ರಶ್ನೆಯಾಗಿದೆ. ಸರ್ಕಾರ ಹಾಗೂ ಕಂದಾಯ ಇಲಾಖೆ ತಕ್ಷಣ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ ಈ ವೃದ್ಧರಿಗೆ ಬದುಕುವ ನೆಲೆಯನ್ನು ಕಲ್ಪಿಸಿಕೊಡಬೇಕು. ಆ ಮೂಲಕ ಈ ವೃದ್ಧ ದಂಪತಿಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಒಂದು ವೇಳೆ ಇನ್ನಷ್ಟು ದಿನ ಇದೇ ರೀತಿ ಧರಣಿ ಮುಂದುವರಿದರೆ ಈ ವೃದ್ಧ ದಂಪತಿಗಳ ಆರೋಗ್ಯದಲ್ಲಿ ಏರುಪೇರಾಗಿ ಅಪಾಯ ಉಂಟಾಗುವ ಸಾಧ್ಯತೆಯೂ ಇದೆ. ಹಾಗಾದ ಪಕ್ಷದಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸುವ ಎಚ್ಚರಿಕೆಯನ್ನು ಅವರು ನೀಡಿದರು. 

ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಮತಯಾಚನೆಗೆ ಈ ಮನೆಗೆ ಹೋಗಿದ್ದಾರೆ.  ಅವರದೇ ಕ್ಷೇತ್ರದ ಈ ವೃದ್ಧ ದಂಪತಿಗಳ ನೋವು ಕೇಳಲು ಅವರು ಬಂದಿಲ್ಲ. ಶಾಸಕಿ ಈ ನ್ಯಾಯ ಕೇಳುತ್ತಿರುವ ಬಡವರಿಗೆ ಸರ್ಕಾರ ಹಾಗೂ ಕಂದಾಯ ಇಲಾಖೆಗೆ ಒತ್ತಡ ಹಾಕುವ ಮೂಲಕ ನ್ಯಾಯ ತೆಗೆಸಿಕೊಡುವ ಕೆಲಸಕ್ಕೆ ಮುಂದಾಗಬೇಕು. ವೃದ್ಧ ದಂಪತಿಗಳಿಗೆ ನಿವೇಶನ ಕೊಡಿಸುವ ಜತೆಗೆ ಈ ವೃದ್ಧರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಪುತ್ತೂರು ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ ಅವರು ಮಾತನಾಡಿ, ವೃದ್ಧ ದಂಪತಿಗಳು ಮಾಡುತ್ತಿರುವ ಈ ಧರಣಿ ವಿಚಾರದಲ್ಲಿ ತಕ್ಷಣ ಪುತ್ತೂರು ಉಪವಿಭಾಗಾಧಿಕಾರಿ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು. ಧರಣಿಯನ್ನು ನಿಲ್ಲಿಸಿ ಅವರಿಗೆ ಸೂಕ್ತ ಪರಿಹಾರ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. 

ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಬಿ.ಕೆ. ಅಣ್ಣಪ್ಪ ಕಾರೆಕ್ಕಾಡು ಅವರು ಮಾತನಾಡಿ, ಈ ಸಮಸ್ಯೆ ಬಗ್ಗೆ ಅಧಿಕಾರವರ್ಗ ತಾಳಿರುವ ನಿರ್ಲಕ್ಷ್ಯ ಸರಿಯಲ್ಲ. ವೃದ್ಧ ದಂಪತಿಗಳ ವಿಚಾರದಲ್ಲಿ ತಕ್ಷಣ ಸರಿಯಾದ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಮಾಜಿ ಸಂಚಾಲಕ ಧನಂಜಯ ಬಲ್ನಾಡು, ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ತೆಂಕಿಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲಲಿತ ನಾಯ್ಕ್ ಕಾರ್ಪಾಡಿ, ತಾಲೂಕು ಮಾಜಿ ಉಪಾಧ್ಯಕ್ಷ ಮನೋಹರ್ ಕೋಡಿಜಾಲು, ಜಿಲ್ಲಾ ಮಾಜಿ ಉಪಾಧ್ಯಕ್ಷ ದಾಮು ಕಲ್ಲೇಗ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article