ಸಾಕಲು ಒಯ್ಯುತ್ತಿದ್ದ ಹಸುಗಳನ್ನು ಮಾಂಸಕ್ಕಾಗಿ ಸಾಗಾಟ ಕೇಸು: ರಾಜ್ಯ ರೈತಸಂಘ ಹಸಿರಸೇನೆ ವತಿಯಿಂದ ಎಸಿ ಕಚೇರಿಗೆ ಮುತ್ತಿಗೆ
ಈ ಘಟನೆ ಜ.10 ರಂದು ನಡೆದಿತ್ತು. ಹಾಲು ಕರೆಯುವ ಒಂದು ಹಸು ಹಾಗೂ ಗಬ್ಬದ ಹಸು ಹಾಗೂ 5 ದಿನಗಳ ಕರುವೊಂದನ್ನು ಪಿರಿಯಾಪಟ್ಟಣದ ರೈತ ಸುನೀಲ್ ಎಂಬಾತ ಸ್ಥಳೀಯ ರೈತನಿಂದ ಖರೀದಿಸಿ ಸಾಗಾಟ ನಡೆಸಿದ್ದರು. ಸುಬ್ರಹ್ಮಣ್ಯ ಬಳಿಯಲ್ಲಿ ಭಜರಂಗದಳದ ವ್ಯಕ್ತಿಯೊಬ್ಬ ಇದಕ್ಕೆ ತಡೆ ಒಡ್ಡಿದ್ದ. ಆದರೆ ಹಾಲು ಕರೆಯುವ ಹಸು ಎಂದಾಗ ಆತನ ಹೊರಟುಹೋಗಿದ್ದ. ಅದಾದ 10 ನಿಮಿಷಕ್ಕೆ ಸ್ಥಳಕ್ಕೆ ಬಂದ ಸುಬ್ರಹ್ಮಣ್ಯ ಪೊಲೀಸರು ಬಂದು ಕಸಾಯಿಖಾನೆಗೆ ಕೊಂಡುಹೋಗುತ್ತಿದ್ದಾರೆ ಎಂದು ಕೇಸು ದಾಖಲಿಸಿದ್ದರು.
ಪೊಲೀಸರು ಈ ಹಸುಗಳನ್ನು ಕಸಾಯಿಖಾನೆಗೆ ಒಯ್ಯುತ್ತಿದ್ದಾರೆ ಎಂದು ಯಾವ ಮಾನದಂಡದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪಶುವೈದ್ಯಾಧಿಕಾರಿ ಇದು ಗಬ್ಬದ ಹಸುವೋ ಗೊಡ್ಡು ದನವೋ ಎಂದು ಪರಿಶೀಲಿಸಿದ ಬಳಿಕ ಕೆಸು ದಾಖಲಿಸಬೇಕಿತ್ತು. ಆದರೆ ಅದನ್ನು ಮಾಡದೆ ಸುಳ್ಳು ದೂರು ದಾಖಲಿಸಿದ್ದಾರೆ. ಇದೀಗ ಪುತ್ತೂರು ಸಹಾಯಕ ಆಯುಕ್ತರು ನಮ್ಮ ಜತೆಗೆ ಮಾತನಾಡಿ, ಪಶುವೈದ್ಯರೇ ಬಂದು ನಿಮ್ಮ ಮುಂದೆಯೇ ಪರೀಕ್ಷೆ ನಡೆಸಿ ವರದಿ ಮಾಡುತ್ತಾರೆ. ಈ ಪ್ರಕರಣದಲ್ಲಿ ಪೊಲೀಸರ ಕ್ರಮ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಒಂದು ವೇಳೆ ಸಂಜೆಯೊಳಗೆ ವರದಿ ನೀಡದಿದ್ದರೆ ತಾಲೂಕು ದಂಡಾಧಿಕಾರಿ ಕಚೇರಿಗೆ ಬೀಗ ಜಡಿದು ಹಗಲೂರಾತ್ರಿ ಧರಣಿ ಮಾಡುತ್ತೇವೆ ಎಂದು ರಾಜ್ಯ ರೈತಸಂಘ ಹಸಿರುಸೇನೆಯ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ್ರು ಎಚ್ಚರಿಕೆ ನೀಡಿದರು.
ಮೊಬೈಲ್ ಫೋನ್-ದುಡ್ಡು ಕಸಿದುಕೊಂಡಿದ್ದಾರೆ:
ಪೊಲೀಸರಿಗೆ ಈ ಹಸು ಹಾಲು ಕರೆಯುವಂತದ್ದು ಎಂದು 8 ಲೀಟರ್ ಹಾಲು ಕರೆದು ಬೀದಿಗೆ ಚೆಲ್ಲಿ ತೋರಿಸಲಾಗಿದೆ. ಹಸುವನ್ನು ತನಗೆ ಮಾರಿದ ರೈತರನ್ನೂ ಕರೆಸಿ ಲಿಖಿತವಾಗಿ ಬರೆದುಕೊಡಲಾಗಿದೆ. ಇದೆಲ್ಲಾ ಆದ ಬಳಿಕ ನಿಮ್ಮನ್ನು ಬಿಟ್ಟುಬಿಡುತ್ತೇವೆ ಎಂದು ಪೊಲೀಸರು ರೈತನ ಕಿಸೆಯಲ್ಲಿದ್ದ 3 ಸಾವಿರ ಹಣವನ್ನು ಪೆಟ್ರೋಲ್ ಬಂಕ್‌ನಲ್ಲಿ ಪೋನ್‌ಪೇ ಮಾಡಿಸಿಕೊಂಡಿದ್ದಾರೆ. ಪುತ್ತೂರಿಗೆ ಬರಲೂ 3 ಸಾವಿರ ಮತ್ತೆ ಕಿತ್ತುಕೊಂಡಿದ್ದಾರೆ. ರೈತನ ಬಳಿಯಲ್ಲಿದ್ದ ಫೋನನ್ನು ಕಿತ್ತುಕೊಂಡು ಯಾರಿಗೂ ಫೋನ್ ಮಾಡಲೂ ಅವಕಾಶ ನೀಡಿಲ್ಲ. ಬಳಿಕ ಎಫ್‌ಐಆರ್ ಮಾಡಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಂತಹ ಕೆಲಸವನ್ನು ಸುಬ್ರಹ್ಮಣ್ಯದ ಪೊಲೀಸರು ಮಾಡಿದ್ದಾರೆ ಎಂದವರು ಆರೋಪಿಸಿದರು.
ಜೋಳ ಮಾರಿ ಹಸು ಖರೀದಿಸಿದ್ದೆ:
ಜೋಳ ಮಾರಿದ ದುಡ್ಡಲ್ಲಿ ಖರೀದಿ ಮಾಡಿದ ದನ ಸಾರ್. ನನಗೆ ದುಡ್ಡೂ ಇಲ್ಲ ಹಸುವೂ ಇಲ್ಲಂತಾದರೆ ವಿಷ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದೇನೆ ಎಂದು ಮಾದ್ಯಮದ ಮುಂದೆ ಅಳವತ್ತುಕೊಂಡ ಪಿರಿಯಾಪಟ್ಟಣದ ರೈತ ಸುನೀಲ್ ಬಿಟ್ಟು ಕಳಿಸ್ತೀನಿ ಅಂದವರು ಈಗ ಎಫ್‌ಐಆರ್ ಮಾಡಿದ್ದಾರೆ. ಹಣವನ್ನೂ ತೆಗೆದುಕೊಂಡಿದ್ದಾರೆ. ನಾವು ಹಾಲು ಕರೆಯುವ ಹಸುವನ್ನು ದೇವೆರೆಂದು ಪೂಜಿಸುವವರು. ಯಾರಾದರೂ ಹಾಲು ಕರೆಯುವ ಹಸುವನ್ನು, ಗಬ್ಬದ ಹಸುವನ್ನು ಕಸಾಯಿಖಾನೆಗೆ ಕೊಡುತ್ತಾರಾ. ನಾವೂ ಮನುಷ್ಯರಲ್ಲಾ ಸಾರ್ ಎಂದು ನೋವು ತೋಡಿಕೊಂಡರು.
ಯುವ ಘಟಕದ ಅಧ್ಯಕ್ಷ ವಿನೋದ್ ಗೌಡ, ರಾಜ್ಯ ಮಹಿಳಾ ಸಂಘದ ಅಧ್ಯಕ್ಷೆ ಅಣ್ಣಪೂರ್ಣೇಶ್ವರಿ, ರಾಜ್ಯ ಉಪಾಧ್ಯಕ್ಷ ಸೋಮಶೇಖರ್, ರಾಜ್ಯ ಸಂಚಾಲಕ ಚಂದ್ರ, ಪಿರಿಯಾಪಟ್ಟಣ ಅಧ್ಯಕ್ಷ ಅಜಿತ್ ಸೇರಿದಂತೆ ಉತ್ತರಕನ್ನಡ, ಮೈಸೂರು,ಚಿಕ್ಕಮಗಳೂರು ಸಹಿತ ಹಲವು ಜಿಲ್ಲೆಗಳಿಂದ ನೂರಾರು ಮಂದಿ ತಾಲೂಕು ಆಡಳಿತ ಸೌಧದ ಮುಂದೆ ಜಮಾಯಿಸಿದ್ದರು. ಬಳಿಕ ಎಸಿ ಕಚೇರಿಯಲ್ಲಿ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅಧ್ಯಕ್ಷತೆಯಲ್ಲಿ ರೈತರೊಂದಿಗೆ ಮಾತುಕತೆ ನಡೆಸಲಾಯಿತು.
ಈ ಸಂದರ್ಭ ತಹಶೀಲ್ದಾರ್ ಕೂಡಲಗಿ, ಡಿವೈಎಸ್ಪಿ ನಾಗೇಗೌಡ, ಇನ್ಸ್‌ಪೆಕ್ಟರ್ ಜಾನ್ಸನ್ ಡಿಸೋಜ ಉಪಸ್ಥಿತರಿದ್ದರು.