ಆರು ದಿನಗಳ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

ಆರು ದಿನಗಳ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ


ಶಿರ್ವ: ಗ್ರಾಮ ಪಂಚಾಯತ್‌ಗಳು, ತಮ್ಮ ಗ್ರಾಮದ ನಾಗರಿಕರ ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಿದ್ದಲ್ಲಿ ಆ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ಆರು ದಿನಗಳ ಬೃಹತ್ ಆರೋಗ್ಯ ಶಿಬಿರವನ್ನು ಆಯೋಜಿಸುವ ಮೂಲಕ ಗ್ರಾಮಸ್ಥರ ಆರೋಗ್ಯ ಕಾಪಾಡಲು ದಿಟ್ಟ ಹೆಜ್ಜೆ ಇರಿಸಿದೆ. ಇದೊಂದು ಮಾದರಿ ಕಾರ್ಯಕ್ರಮ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಸೋಮವಾರ ಇನ್ನಂಜೆ ಗ್ರಾ.ಪಂ. ನೇತೃತ್ವದಲ್ಲಿ ಕರ್ನಾಟಕ ಸರಕಾರ, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲ, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಇನ್ನಂಜೆ ಎಸ್‌ವಿಹೆಚ್ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಏರ್ಪಡಿಸಿದ ಆರು ದಿನಗಳ ಬೃಹತ್ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಇನ್ನಂಜೆ ಗ್ರಾ.ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ ವಹಿಸಿ ಮಾತನಾಡಿ, ಗ್ರಾಮ ಪಂಚಾಯತ್‌ಗೆ ಪುರಸ್ಕಾರವಾಗಿ ದೊರೆತ 7 ಲಕ್ಷ ರೂ. ಅನುದಾನವನ್ನು ಬಳಸಿಕೊಂಡು ಆರೋಗ್ಯ ಸಹಿತ ವಿವಿಧ ಸಾಮಾಜಿಕ ಭದ್ರತೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಗ್ರಾ.ಪಂ. ಸದಸ್ಯರು, ಅಧಿಕಾರಿವರ್ಗ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ನೀಡುತ್ತಿರುವ ಪೂರ್ಣ ಸಹಕಾರವೇ ಈ ಸಾಧನೆಗೆ ಪ್ರೇರಣಾಶಕ್ತಿ ಎಂದರು.

ಕಾಪು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿ’ಸಿಲ್ವ, ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ, ಇನ್ನಂಜೆ ಎಸ್.ವಿ.ಎಚ್. ಪ.ಪೂ. ಕಾಲೇಜಿನ ಪ್ರಾಚಾರ್ಯ ರಾಜೇಂದ್ರ ಪ್ರಭು, ಪತ್ರಕರ್ತ ರಾಕೇಶ್ ಕುಂಜೂರು, ಗ್ರಾ.ಪಂ. ಉಪಾಧ್ಯಕ್ಷೆ ಸುರೇಖಾ ಶೆಟ್ಟಿ, ನೋಡೆಲ್ ಅಧಿಕಾರಿ ಡಾ. ಸಂತೋಷ್ ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ನಿವೃತ್ತ ಪಂ.ಕಾರ್ಯದರ್ಶಿ ಚಂದ್ರಶೇಖರ ಸಾಲಿಯಾನ್ ನಿರೂಪಿಸಿ, ವಂದಿಸಿದರು.

ಶಿಬಿರದಲ್ಲಿ ಇಎನ್‌ಟಿ, ನೇತ್ರ ತಪಾಸಣೆ, ಮಧುಮೇಹ, ಬಿ.ಪಿ, ಕ್ಷಯರೋಗ ಮಾಹಿತಿ, ಎಚ್‌ಐವಿ ಪರೀಕ್ಷೆ ಮತ್ತು ಮಾಹಿತಿ, ಗರ್ಭಕಂಠ, ಸ್ತನ ಕ್ಯಾನ್ಸರ್ ಪರೀಕ್ಷೆ,  ಚರ್ಮರೋಗದ ತಪಾಸಣೆ, ಪೌಷ್ಠಿಕಾಂಶದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article