ಅಂಗಡಿ ಕಟ್ಟಡ ವಿವಾದ: ಪಿಡಿಓ ಭೇಟಿ: ಸ್ಥಳ ಮಹಜರು
ಸುಬ್ರಹ್ಮಣ್ಯ ನೂಚೀಲ ನಿವಾಸಿ ಸಂತೋಷ್ ಕುಮಾರ್ ಎಂಬವರು ನೀಡಿದ ದೂರಿನ ಅನ್ವಯ ಸುಬ್ರಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಹಾಗೂ ಕಾರ್ಯದರ್ಶಿ ಮೋನಪ್ಪ ಡಿ. ಅವರು ಗುರುವಾರ ಮಧ್ಯಾಹ್ನ ವಿವಾದಿತ ಸ್ಥಳಕ್ಕೆ ಹೋಗಿ ಮಹಜರು ಮಾಡಿರುವರು.
ಈ ಸಂದರ್ಭದಲ್ಲಿ ದೂರುದಾರ ಸಂತೋಷ್ ಕುಮಾರ್ ಅಂಗಡಿ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿದರು. ಸುಬ್ರಹ್ಮಣ್ಯ ಗ್ರಾಮದ ಸರ್ವೆ ನಂಬರ್ 82/5ರಲ್ಲಿ ಈ ಹಿಂದೆ ಶಿವರಾವ್ ಎನ್ನುವರು ಸ್ಥಳ ಹಾಗೂ ಕಟ್ಟಡಗಳ ಮಾಲೀಕರಾಗಿದ್ದರು. ಶಿವ ರಾವ್ ಅವರ ಕುಟುಂಬದವರಾದ ಬಳ್ಪದ ಶ್ರೀವತ್ಸ ಎಂಬವರಿಗೂ ಕೋರ್ಟಿನಲ್ಲಿ ವ್ಯಾಜ್ಯ ನಡೆದಿತ್ತು.
ವ್ಯಾಜ್ಯ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಲು ಕೂಡ ಏರಿತ್ತು. ಅಂತಿಮವಾಗಿ ಇತ್ತೀಚೆಗೆ ಭೂಮಿ ಹಾಗೂ ಕಟ್ಟಡಗಳ ಮಾಲೀಕತ್ವ ಬಳ್ಪ ಶ್ರೀವತ್ಸ ಅವರಿಗೆ ಕೋರ್ಟ್‌ನಲ್ಲಿ ಆದೇಶವಾಗಿತ್ತು ಎನ್ನಲಾಗಿದೆ. ಅದರಂತೆ ಶ್ರೀವತ್ಸ ಅವರು ಈ ಹಿಂದೆ ಇದ್ದ ಅಂಗಡಿ ಮಾಲೀಕರನ್ನ ಕರೆಸಿ ಕೆಲವೊಂದು ಅಂಗಡಿಗಳನ್ನು ಹಿಂದೆ ನಡೆಸಿಕೊಂಡು ಬರುತ್ತಿದ್ದವರಿಗೂ ಉಳಿದವುಗಳನ್ನು ಇತರರಿಗೂ ನೀಡಿದರೆನ್ನಲಾಗಿದೆ. ಆದರೆ ಭೂಮಿ ಹಾಗೂ ಕಟ್ಟಡಗಳಿಗೆ ಗಡಿ ಗುರುತಾಗಲಿ, ಕನ್ವರ್ಷನ್ ಆಗಲಿ, ಅಥವಾ 9/11 ಆಗಲಿ ದಾಖಲೆ ಇರುವುದಿಲ್ಲ ಎನ್ನಲಾಗಿದೆ.
ದೂರುದಾರರ ಅರ್ಜಿಯಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯವರು ಸ್ಥಳ ಮಹಜರು ಮಾಡಿ ಅಂಗಡಿ ಮಾಲೀಕರಿಗೆ ಗಡಿ ಗುರುತು ಹಾಗೂ 9/11 ಮಾಡುವಂತೆ ಕೂಡಲೇ ನೋಟಿಸ್ ನೀಡುವುದಾಗಿ ತಿಳಿಸಿರುತ್ತಾರೆ.