ಮಗುಚಿದ ದೋಣಿ: ಈರ್ವರು ಪ್ರವಾಸಿಗರ ಸಾವು
ಉಡುಪಿ: ಪ್ರವಾಸಿಗರನ್ನು ವಿಹಾರಕ್ಕೆ ಕರೆದೊಯ್ಯುತ್ತಿದ್ದ ದೋಣಿಯೊಂದು ಸಮುದ್ರದಲ್ಲಿ ಮಗುಚಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಒಬ್ಬರು ಗಂಭೀರ ಸ್ಥಿತಿಯಲ್ಲಿರುವ ಘಟನೆ ಸೋಮವಾರ ಬೆಳಗ್ಗೆ ಕೋಡಿಬೆಂಗ್ರೆ ಬೀಚ್ ಬಳಿ ಸಂಭವಿಸಿದೆ.
ದುರಂತದಲ್ಲಿ ಹಲವರು ಅಸ್ವಸ್ಥರಾಗಿದ್ದಾರೆ. ಮೃತರನ್ನು ಶಂಕರಪ್ಪ (22) ಮತ್ತು ಸಿಂಧು (23) ಎಂದು ಗುರುತಿಸಲಾಗಿದ್ದು, ದಿಶಾ (26) ಎಂಬ ಯುವತಿಯ ಸ್ಥಿತಿ ಚಿಂತಾಜನಕವಾಗಿದೆ. ಧರ್ಮರಾಜ (26) ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
ಮೈಸೂರಿನ ಸರಸ್ವತಿಪುರಂನಲ್ಲಿರುವ ಕಾಲ್ ಸೆಂಟರ್ ವೊಂದರ ಉದ್ಯೋಗಿಗಳಾದ ಈ ಪ್ರವಾಸಿಗರು ಉಡುಪಿಯ ಸ್ಥಳೀಯ ರೆಸಾರ್ಟ್‌ನಲ್ಲಿ ತಂಗಿದ್ದರು. ವಿಹಾರಕ್ಕಾಗಿ ಮಲ್ಪೆ ಡೆಲ್ಟಾ ಬೀಚ್ ಪಾಯಿಂಟ್‌ನಿಂದ ಹೊರಟ ವೇವ್‌ರೈಡರ್ಸ್ ಕಂಪನಿಗೆ ಸೇರಿದ ದೋಣಿ, ಹಂಗಾರಕಟ್ಟೆ ಹಡಗು ನಿರ್ಮಾಣ ಪ್ರದೇಶದ ಬಳಿ ನದಿ ಹಾಗೂ ಸಮುದ್ರ ಸೇರುವ ಅಳಿವೆ ಬಾಗಿಲಿನಲ್ಲಿ ಮಗುಚಿ ಬಿತ್ತು.
ದೋಣಿಯಲ್ಲಿ ಒಟ್ಟು 14 ಮಂದಿ ಪ್ರವಾಸಿಗರಿದ್ದು, ಘಟನೆ ಸಂದರ್ಭದಲ್ಲಿ ಯಾರೂ ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ದೋಣಿ ಮಗುಚಿದ ತಕ್ಷಣ ಸ್ಥಳೀಯರು ಹಾಗೂ ಇತರ ದೋಣಿಯಲ್ಲಿದ್ದವರು ತಕ್ಷಣ ಧಾವಿಸಿ ಪ್ರವಾಸಿಗರನ್ನು ರಕ್ಷಿಸಿ ದಡಕ್ಕೆ ಕರೆತಂದರು.
ಗಂಭೀರ ಸ್ಥಿತಿಯಲ್ಲಿದ್ದ ನಾಲ್ವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಎಸ್.ಪಿ. ಹರಿರಾಮ್ ಶಂಕರ್ ತಿಳಿಸಿದ್ದಾರೆ. ಉಳಿದವರು ಪ್ರಾಥಮಿಕ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಘಟನೆ ಮಲ್ಪೆ ಮತ್ತು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿಭಾಗದಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೋಣಿ ಸಂಚಾರದ ವೇಳೆ ಸುರಕ್ಷತಾ ನಿಯಮಗಳ ಪಾಲನೆ ಆಗಿದೆಯೇ? ಲೈಫ್ ಜಾಕೆಟ್ ಬಳಕೆ ಯಾಕೆ ಕಡ್ಡಾಯಗೊಳಿಸಿರಲಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.
ಆದರೆ, ದೋಣಿಯ ಪ್ರಯಾಣಿಕರೊಬ್ಬರು ಹೇಳಿದಂತೆ ಎಲ್ಲರಿಗೂ ಲೈಫ್ ಜಾಕೆಟ್ ನೀಡಲಾಗಿತ್ತು. ಆದರೆ, ಕೆಲವರು ಅದನ್ನು ಧರಿಸಿಲ್ಲ. ಈ ಬಗ್ಗೆ ಪೊಲೀಸರು ಮತ್ತು ಕರಾವಳಿ ಭದ್ರತಾ ಅಧಿಕಾರಿಗಳು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.