ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನ ಸಹಭಾಗಿತ್ವದಲ್ಲಿ ಮಕರ ಸಂಕ್ರಾಂತಿ ಸಂದರ್ಭ ರಾಜ್ಯಾದ್ಯಂತ ನಡೆಸಲಾದ 14,049 ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ
Wednesday, January 14, 2026
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನ ಸಹಭಾಗಿತ್ವದಲ್ಲಿ ಮಕರ ಸಂಕ್ರಾಂತಿ ಸಂದರ್ಭದಲ್ಲಿ ರಾಜ್ಯಾದ್ಯಂತ 14,049 ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಚತುರ್ವಿಧ ದಾನಗಳಿಗೆ ಹೆಸರುವಾಸಿಯಾದ ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಚ್ಛತೆಯ ಸಂಕೇತವೂ ಹೌದು. ಸ್ವಚ್ಛತೆಯಿದ್ದಲ್ಲಿ ಭಗವಂತನಿದ್ದಾನೆ ಎಂಬಂತೆ ಶ್ರೀ ಕ್ಷೇತ್ರದಲ್ಲಿ ಅನಾದಿಕಾಲದಿಂದಲೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬರಲಾಗಿದೆ. ಪರಿಣಾಮವಾಗಿ ರಾಷ್ಟ್ರಮಟ್ಟದಲ್ಲಿ ‘ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಚ್ಛ ಧಾರ್ಮಿಕ ನಗರಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ನಮ್ಮ ದೇಶದ ಪ್ರಧಾನಿಗಳ ಪರಿಕಲ್ಪನೆಯ ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆ ಅವರು ಕರ್ನಾಟಕ ರಾಜ್ಯದ ಎಲ್ಲಾ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆಗೆ ಗಮನ ಹರಿಸುವಂತೆ ಪ್ರೇರಣೆ, ಮಾರ್ಗದರ್ಶನ ನೀಡಿದರು.
ಈ ಮೂಲಕ ಸಮಸ್ತ ಜನತೆಯಲ್ಲಿ ನಮ್ಮ ಊರಿನ ಶ್ರದ್ಧಾ ಕೇಂದ್ರಗಳ ಸ್ವಚ್ಛತೆಯನ್ನು ಕಾಪಾಡುವುದು ನಮ್ಮ ಜವಾಬ್ದಾರಿ ಎಂಬ ಅರಿವು ಮೂಡಿಸಲು ‘ನಮ್ಮೂರು ನಮ್ಮ ಶ್ರದ್ಧಾಕೇಂದ್ರ’ ಎಂಬ ಧ್ಯೇಯ ವಾಕ್ಯದಂತೆ ಹಳ್ಳಿ ಹಳ್ಳಿಯಲ್ಲಿಯೂ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಸ್ವಚ್ಛತಾ ಅಭಿಯಾನವನ್ನು ‘ಸ್ವಚ್ಛತಾ ಸಪ್ತಾಹವಾಗಿ’ ಅನುಷ್ಠಾನಿಸಲಾಯಿತು.
ಈ ಸ್ವಚ್ಛತಾ ಸಪ್ತಾಹದಲ್ಲಿ ಜನರೇ ಸ್ವಯಂ ಪ್ರೇರಣೆಯಿಂದ ಸ್ವಯಂ ಸೇವಕರಾಗಿ ಪಾಲ್ಗೊಂಡು ವರ್ಷದಲ್ಲಿ 2 ಬಾರಿ ಅಂದರೆ ದೇಶದ ಸ್ವಾತಂತ್ರ್ಯೋತ್ಸವ ಮತ್ತು ಮಕರ ಸಂಕ್ರಾತಿಯ ಸಂದರ್ಭ ಸಪ್ತಾಹದ ಮೂಲಕ ಶ್ರದ್ಧಾಕೇಂದ್ರಗಳಾದ ದೇವಸ್ಥಾನ, ಬಸದಿ, ಮಸೀದಿ, ಚರ್ಚ್‌ಗಳ ಸ್ವಚ್ಛತೆಯನ್ನು ಕೈಗೊಳ್ಳುವ ಮೂಲಕ ಸ್ವಚ್ಛತಾ ಸಂದೇಶವನ್ನು ಸಾರುತ್ತಾರೆ.
ಕಳೆದ 10 ವರ್ಷಗಳಿಂದ ನಿರಂತರವಾಗಿ ಸ್ವ-ಸಹಾಯ ಸಂಘಗಳ ಸದಸ್ಯರು ಶ್ರದ್ಧಾಕೇಂದ್ರದ ಸ್ವಚ್ಛತೆಯನ್ನು ಕೈಗೊಳ್ಳುತ್ತಿದ್ದು, ಈ ಬಾರಿ ಮಕರ ಸಂಕಾಂತಿ ಅಂದರೆ ಉತ್ತರಾಯಣ ಪುಣ್ಯ ಕಾಲ ಜ.14 ರ ಮೊದಲು ರಾಜ್ಯದ ಎಲ್ಲಾ ಶ್ರದ್ಧಾಕೇಂದ್ರಗಳು ಸ್ವಚ್ಛ ಮತ್ತು ಪಾವಿತ್ರ್ಯತೆಯಿಂದ ಕೂಡಿರಬೇಕೆಂಬ ಉದ್ದೇಶದಿಂದ ಜ.7 ರಿಂದ 13 ರವೆರೆಗೆ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಸಪ್ತಾಹವನ್ನು ನಡೆಸಲಾಗಿದೆ.
ರಾಜ್ಯದಾದ್ಯಂತ 14,049 ಶ್ರದ್ಧಾಕೇಂದ್ರಗಳನ್ನು ಗುರುತಿಸಲಾಗಿದ್ದು, ಸುಮಾರು 3,39,699 ಸ್ವಯಂ ಸೇವಕರು, ದೇವಾಲಯದ ಆಡಳಿತ ಮಂಡಳಿ, ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ಸದಸ್ಯರು, ನವಜೀವನ ಸಮಿತಿಯ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣೆಯ ಸದಸ್ಯರು, ಸ್ವಚ್ಛತಾ ಸೇನಾನಿಗಳು, ಊರಿನ ಗಣ್ಯರು, ಗ್ರಾಮಪಂಚಾಯತ್‌ನ ಸದಸ್ಯರು ವಿವಿಧ ಸಂಘ ಸಂಸ್ಥೆಯ ಕಾರ್ಯಕರ್ತರು ಭಾಗವಹಿಸಿ ರಾಜ್ಯಾದಾದ್ಯಂತ ನಡೆಯುವ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.









