ಕಾರು ಢಿಕ್ಕಿ ಹೊಡೆದು ಬೈಕಿನಲ್ಲಿದ್ದ ದಂಪತಿ ಹಾಗೂ ಮಗುವಿಗೆ ಗಾಯ
ಬಂಟ್ವಾಳ: ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ದಂಪತಿ ಹಾಗೂ ಮಗು ಗಾಯಗೊಂಡ ಘಟನೆ ಬಿ ಕಸಬಾ ಗ್ರಾಮದ ಚೆಂಡ್ತಿಮಾರು ಎಂಬಲ್ಲಿ ಸಂಭವಿಸಿದೆ.
ಗಾಯಗೊಂಡವರನ್ನು ಮಂಚಿ ಸೈಟ್ ನಿವಾಸಿ ಉಬೈದ್ (28), ಅವರ ಪತ್ನಿ ರಮ್ಲತ್ (23) ಹಾಗೂ ಒಂದು ವರ್ಷ ಪ್ರಾಯದ ಮಗು ರಿಜಾನ್ ಎಂದು ಗುರುತಿಸಲಾಗಿದೆ.
ಉಬೈದ್ ಅವರು ಬೈಕಿನಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಗ್ಗ ಕಡೆಯಿಂದ ತನ್ನ ಮನೆಯಾದ ಮಂಚಿ ಕಡೆಗೆ ಕಡೂರು-ಬಿ.ಸಿ. ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ ಬಿ ಕಸಬಾ ಗ್ರಾಮದ ಚಂಡ್ತಿಮಾರ್ ಎಂಬಲ್ಲಿಗೆ ತಲುಪಿದಾಗ ಬಿ.ಸಿ. ರೋಡು ಕಡೆಯಿಂದ ಬೆಳ್ತಂಗಡಿಯತ್ತ ಸಂಚರಿಸುತ್ತಿದ್ದ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ದಂಪತಿ ಹಾಗೂ ಮಗು ಬೈಕ್ ಸಮೇತ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಮೂವರಿಗೂ ಗಾಯಗಳಾಗಿವೆ. ತಕ್ಷಣ ಸ್ಥಳೀಯರು ಇವರನ್ನು ತುಂಬೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.