ಆಧ್ಯಾತ್ಮಿಕತೆಯಿಂದ ಬದುಕು ಸುಂದರ: ಶ್ರೀ ಗುರುದೇವಾನಂದ ಸ್ವಾಮೀಜಿ
ನೀರುಮಾರ್ಗ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಫೆ.7 ರಂದು ಆಯೋಜಿಸಲಾದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್(ಬಿಎಲ್‌ಪಿ) ಪೆಲತ್ತಡಿ ಮಾತನಾಡಿ, ದೇವರ ಅನುಗ್ರಹದಿಂದ ಕೇವಲ ಎರಡೂವರೆ ತಿಂಗಳ ಅವಧಿಯಲ್ಲಿ ಮಾಣೂರು ಶ್ರೀ ಕ್ಷೇತ್ರ ಜೀರ್ಣೊದ್ಧಾರಗೊಂಡು, ಬ್ರಹ್ಮಕಲಶೋತ್ಸವ ನಡೆಯುವಂತಾಗಿದೆ. ಪ್ರಕೃತಿ ಮಡಿಲಲ್ಲಿ ಸುಂದರವಾಗಿ ತಲೆ ಎತ್ತಿರುವ ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ಸರ್ವಧರ್ಮೀಯರ ಸಹಕಾರ-ಕೊಡುಗೆ ಇದೆ. ಇಲ್ಲಿನ ವ್ಯವಸ್ಥೆ ಸರ್ವ ಜನರ ಪ್ರೀತಿ, ಸಹಬಾಳ್ವೆ, ಸಾಮರಸ್ಯಕ್ಕೆ ಧ್ಯೋತಕವಾಗಲಿ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಂಸದ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಹಿಂದೂ ಧರ್ಮದಲ್ಲಿ ಪುನರ್ಜನ್ಮದ ನಂಬಿಕೆ ಇದೆ. ಈ ಜನ್ಮದಲ್ಲಿ ಒಳ್ಳೆಯದು ಮಾಡಿದರೆ ಮಾತ್ರ ಮುಂದಿನ ಜನ್ಮ ನಿರ್ಧರಿಸಲ್ಪಡುತ್ತದೆ. ಹಿಂದಿನ ಜನ್ಮದ ಪುಣ್ಯದ ಫಲದಿಂದ ಮನುಷ್ಯರಾಗಿದ್ದೇವೆ. ಭಗವಂತನ ಅನುಗ್ರಹದಿಂದ ಮಾಣೂರು ಶ್ರೀ ಸುಬ್ರಾಯ ಕ್ಷೇತ್ರದಲ್ಲಿ ಪುಣ್ಯದ ಕೆಲಸ ನಡೆಯುತ್ತಿದೆ. ಇದರಲ್ಲಿ ಆಬಾಲವೃದ್ಧರ ಶ್ರಮವಿದೆ ಎಂದರು.
ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ ಧಾರ್ಮಿಕ ಉಪನ್ಯಾಸ ನೀಡಿ, ಧರ್ಮ ಎಂದರೆ ಮೌಲ್ಯ. ಪೂಜಾ ಪದ್ಧತಿ ಅಲ್ಲ. ದೇವರಿಗೆ ರೂಪ ಇಲ್ಲ, ದೇವರೆಂದರೆ ತತ್ವ. ಬ್ರಹ್ಮಾಂಡದಲ್ಲಿ ಹಲವು ತತ್ವಗಳಿವೆ. ಅದೇ ಭಗವಂತ. ಅನ್ನ ಎಂದರೆ ಅಗ್ನಿಗೆ ಕೊಡುವ ಹವಿಸ್ಸು. ಅದರಲ್ಲಿ ತಾರತಮ್ಯ ಬೇಡ. ಹಿರಿಯರಿಗೆ ಗೌರವ ಕೊಡಿ ಎಂದರು.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಸಮಿತಿ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಶುಭ ಹಾರೈಸಿದರು. ಹಲವರ ಸೇವೆ ಗುರುತಿಸಿ ಗೌರವಿಸಲಾಯಿತು.
ಜೀರ್ಣೋದ್ಧಾರ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ಭಟ್ ಬೊಳ್ಮಾರಗುತ್ತು, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಜೆ. ಮಾಣೂರು, ಪ್ರಧಾನ ಅರ್ಚಕ ರಾಜೇಶ್ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಉಮಾನಾಥ ಸುವರ್ಣ ನೀರುಮಾರ್ಗ, ಮುರಳೀಧರ ಕರ್ಕೇರ ಕೆಂಪುಗುಡ್ಡೆ, ರಾಮಕೃಷ್ಣ ರಾಮರಬೈಲು, ಕೃಷ್ಣ ನಾಯ್ಕ್ ಕುಟ್ಟಿಕಳ, ಮೋಹಿನಿ ಎಂ. ನೀರುಮಾರ್ಗ, ಧನವಂತಿ ವಿ. ಸರಿಪಲ್ಲ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಜಯಶೀಲ ಅಡ್ಯಂತಾಯ ಅಡ್ಯಾರು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯ ಕೊರಿಯಾರ್, ಸೀತಾರಾಮ ಮುಳಿಹಿತ್ಲು, ಚಿತ್ತರಂಜನ್ ಬೋಳಾರ, ರೂಪೇಶ್ ರೈ, ಉದಯ ಕುಮಾರ್ ಪಚ್ಚನಾಡಿ, ಪಿಡಬ್ಲ್ಯೂಡಿ ಗುತ್ತಿಗೆದಾರ ಶ್ರವಣ್ ಶೆಟ್ಟಿ ಮೊಗರುಗುತ್ತು, ಧರ್ಮಸ್ಥಳ ಬಜ್ಪೆ ಯೋಜನಾಧಿಕಾರಿ ಗಿರೀಶ್ ಕುಮಾರ್ ಎಂ, ಕುಪ್ಪೆಪದವು ವರಾಹ ಫೌಂಡೇಶನ್ ಸ್ಥಾಪಕಾಧ್ಯಕ್ಷ ಗಿರೀಶ್ ಆಳ್ವ, ಶಿವಪ್ಪ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪತ್ರಕರ್ತ ವಿಜಯ್ ಕೋಟ್ಯಾನ್ ಪಡು ಸ್ವಾಗತಿಸಿದರು. ನಿರೂಪಿಸಿದ ದೀಪಕ್ ಅಡ್ಯಾರು ವಂದಿಸಿದರು.