ನೀರುಮಾರ್ಗ ಮಾಣೂರು ಶ್ರೀ ಸುಬ್ರಾಯ ದೇವರಿಗೆ ಸಂಭ್ರಮ-ಸಡಗರದ ಅದ್ದೂರಿ ಬ್ರಹ್ಮಕಲಶಾಭಿಷೇಕ
ಪೂಜೆ ನಡೆಯುತ್ತಿದ್ದ ವೇಳೆ ದೇವಸ್ಥಾನದಲ್ಲಿ ಊರ ಪರವೂರು ಸಾವಿರಾರು ಭಕ್ತರು ನೆರೆದಿದ್ದು, ಬ್ರಹ್ಮಕಲಶಾಭಿಷೇಕ ನಡೆಯುತ್ತಿದ್ದಂತೆ ಭಕ್ತರ ಜಯಘೋಷ ಮೊಳಗಿತು. ದೇವಳದೊಳಗೆ ವಾದ್ಯ-ಚೆಂಡೆ-ಕೊoಬುಕಹಳೆಯ ನಾದ ಕೇಳಿಬಂದರೆ, ಸುತ್ತಲ ಪ್ರದೇಶದಲ್ಲಿ ನಿರಂತರ ಪಟಾಕಿ ಸಿಡಿಸಲಾಯಿತು. ಭಕ್ತರ ಸರದಿಗೆ ಕಾರ್ಯಕರ್ತರು ಸಹಕರಿಸಿದರೆ, ಅನ್ನಛತ್ರದಲ್ಲಿ ಊಟೋಪಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಧರ ಭಟ್ ಬೊಳ್ಮಾರಗುತ್ತು, ಪ್ರಧಾನ ಸಂಚಾಲಕ ಎಸ್. ಗಣೇಶ್ ರಾವ್, ಅಧ್ಯಕ್ಷ ಪದ್ಮನಾಭ ಕೋಟ್ಯಾನ್ ಪೆಲತ್ತಡಿ(ಬಿಎಲ್‌ಪಿ), ಕಾರ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಧಾನ ಅರ್ಚಕ ರಾಜೇಶ್ ಭಟ್, ವಿವಿಧ ಸಮಿತಿ ಹಾಗೂ ಉಪಸಮಿತಿಗಳ ಸಂಚಾಲಕರು, ಪದಾಧಿಕಾರಿಗಳು, ಊರಿನ ಗಣ್ಯರು, ಪಕ್ಷಾತೀತ ಪ್ರಮುಖರು, ಸ್ವಯಂಸೇವಕರು, ಭಕ್ತರು ಇದ್ದರು.
ಬ್ರಹ್ಮಕಲಶಾಭಿಷೇಕದ ಬಳಿಕ ಪರಿಕಲಶಾಭಿಷೇಕ, ರುದ್ರಯಾಗ, ದುರ್ಗಾಹೋಮ, ಮಹಾಪೂಜೆ, ನೂತನ ಧ್ವಜಾರೋಹಣ(ಪ್ರಪ್ರಥಮ) ನಡೆಯಿತು. ಅನ್ನಛತ್ರದಲ್ಲಿ ಪಲ್ಲಪೂಜೆ ನಡೆದು ಮಹಾ ಅನ್ನಸಂತರ್ಪಣೆ ಆರಂಭಗೊಂಡಿತು.
ಮಧ್ಯಾಹ್ನ 1ರಿಂದ ಸಂದೇಶ್ ನೀರುಮಾರ್ಗ ಹಾಗೂ ಬಳಗದವರಿಂದ ಭಕ್ತಿಗಾನಾಮೃತ, ನೃತ್ಯಕಲಾಭಾರತಿ ತಂಡ ಮತ್ತು ಸುಬ್ರಹ್ಮಣ್ಯ ಭಜನಾ ಮಂಡಳಿ(ರಿ) ನೀರುಮಾರ್ಗ ಸಹಯೋಗದಲ್ಲಿ ಕೀರ್ತನಾಮೃತ, ಸಂಜೆ 5ಕ್ಕೆ ಧಾರ್ಮಿಕ ಸಭೆ, ರಾತ್ರಿ 7ರಿಂದ ಶ್ರೀ ದೇವರಿಗೆ ಹೂವಿನ ಪೂಜೆ, ಸಣ್ಣರಂಗ ಪೂಜೆ, ಬಲಿ ಉತ್ಸವಾದಿಗಳು, ಅಶ್ವವಾಹನ ಸೇವೆ, ಪಲ್ಲಕಿ ಸೇವೆ ಹಾಗೂ ರಾತ್ರಿ 8ರಿಂದ ವಿಧಾತ್ರೀ ಕಲಾವಿದೆರ್ ಕುಡ್ಲ ಇವರಿಂದ ‘ಜೈ ಹನುಮಾನ್’ ನಾಟಕ ಪ್ರದರ್ಶನಗೊಂಡಿತು.